ಗದುಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ
ಗದಗ: ಇಲ್ಲಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಹಲವು ವಿಶಿಷ್ಟ ಕೋರ್ಸ್‌ಗಳಿದ್ದು, ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿದ ಆರು ಪದವಿ ಪೋಗ್ರಾಂಗಳಿವೆ.
ಬಿಎ ವಿಭಾಗ–ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ, ಬಿಕಾಂ ವಿಭಾಗ–ಇನೋವೇಷನ್ ಆ್ಯಂಡ್ ಸ್ಟಾರ್ಟ್‌ಅಪ್ಸ್, ಸ್ಕಿಲ್ ಆ್ಯಂಡ್ ಎಂಟರ್‌ಪ್ರುನರ್‌ಶಿಷ್. ಬಿಎಸ್‌ಸಿ ವಿಭಾಗ–ಅಗ್ರಿ ಬ್ಯುಸಿನೆಸ್ ಆ್ಯಂಡ್ ಫುಡ್ ಪ್ರೊಸೆಸಿಂಗ್, ಜಿಯೋಇನ್ಫಾರ್ಮ್ಯಾಟಿಕ್ಸ್ ಆ್ಯಂಡ್ ಕಂಪ್ಯೂಟರ್ ಸೈನ್ಸ್ ವಿಷಯಗಳ ಸಂಯೋಜನೆ ಇದ್ದು, ಇವು ಬೇರೆಲ್ಲೂ ಇಲ್ಲ. ಅದೇ ರೀತಿ, ‘ಪಬ್ಲಿಕ್ ಹೆಲ್ತ್’ಗೆ ಸಂಬಂಧಿಸಿದ ವಿಶೇಷ ಆಯ್ಕೆ ಇಲ್ಲಿ ಲಭ್ಯವಿದೆ. ಈ ಶೈಕ್ಷಣಿಕ ವರ್ಷದಿಂದ ಬಿಸಿಎ ಕೂಡ ಪ್ರಾರಂಭಗೊಂಡಿದೆ.
‘ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ಸೃಷ್ಟಿಸುವ ವ್ಯಕ್ತಿಗಳನ್ನು ರೂಪಿಸುವ ಧ್ಯೇಯದೊಂದಿಗೆ ವಿವಿಧ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಿ ಇಲ್ಲಿ ವಿವಿ ತರಬೇತಿ ನೀಡುತ್ತಿದೆ. ನಮ್ಮಲ್ಲಿ ಪದವಿ ಕಲಿತವರು ಕಂಪನಿಗಳು, ಆಹಾರ ಮತ್ತು ಕೃಷಿ ಸಂಬಂಧಿತ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಾಕಷ್ಟು ಯೋಜನೆಗಳಿದ್ದು ಇವುಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು ಕೆಲವರು ಎನ್‌ಜಿಒಗಳಲ್ಲಿ ದುಡಿಯುತ್ತಿದ್ದಾರೆ. ಅದಕ್ಕಿಂತ ಮಿಗಿಲಾಗಿ, ನಮ್ಮಲ್ಲಿ ಶಿಕ್ಷಣ ಪೂರೈಸಿ ತಾವೇ ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಿ ಅನೇಕರಿಗೆ ಉದ್ಯೋಗ ನೀಡಿದ್ದಾರೆ’ ಎನ್ನುತ್ತಾರೆ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ.
ವಿವಿಯಲ್ಲಿ ಪ್ಲೇಸ್‌ಮೆಂಟ್ ಸೆಲ್ ಇದ್ದು, ಇಲ್ಲಿಗೆ ಪ್ರತಿವರ್ಷ 20ಕ್ಕೂ ಹೆಚ್ಚು ಕಂಪನಿಗಳವರನ್ನು ಆಹ್ವಾನಿಸಲಾಗುತ್ತದೆ. ಕಳೆದ ವರ್ಷ 86 ಮಂದಿ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ನೇಮಕಗೊಂಡಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಪಡೆಯುವ ಪದವಿಗಿಂತ ಕೌಶಲಕ್ಕೆ ಅಧಿಕ ಮನ್ನಣೆ ಇದೆ. ವಿದ್ಯಾರ್ಥಿಗಳಲ್ಲಿ ವಿಷಯಜ್ಞಾನದ ಜತೆಗೆ ಕೌಶಲ ಬೆಳೆಸುವ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಮಾಡುತ್ತಿದೆ.ಪ್ರೊ. ಸುರೇಶ ವಿ.ನಾಡಗೌಡರ, ಪ್ರಭಾರ ಕುಲಪತಿ
‘ನಮ್ಮಲ್ಲಿ ಪದವಿ ಓದಿದವರು ಸ್ನಾತಕೋತ್ತರ ಪದವಿ ಮಾಡಲು ಇಚ್ಛಿಸಿದರೆ ಎಂಎ, ಎಂಕಾಂ, ಎಂಎಸ್‌ಸಿ, ಎಂಪಿಎಚ್, ಎಂಸಿಎ, ಎಂಬಿಎ ಕೋರ್ಸ್‌ಗಳು ಕೂಡ ಲಭ್ಯ ಇವೆ. ಜಿಯೋಇನ್ಫಾರ್ಮ್ಯಾಟಿಕ್ಸ್, ಅಗ್ರಿ ಬ್ಯುಸಿನೆಸ್ ಆ್ಯಂಡ್ ಫುಡ್ ಪ್ರೊಸೆಸಿಂಗ್ ಕೋರ್ಸ್‌ಗಳಿಗೆ ಅತ್ಯುತ್ತಮ ಬೇಡಿಕೆ ಇದೆ. ಪಿಯುಸಿ ನಂತರ ಎಂಜಿನಿಯರಿಂಗ್, ಮೆಡಿಕಲ್‌ಗಿಂತ ಈ ರೀತಿಯ ಕೋರ್ಸ್‌ಗಳನ್ನು ಓದಿದರೆ ಬೇರೆ ಕಡೆಗಳಲ್ಲಿ ಉದ್ಯೋಗ ಪಡೆಯುವುದರ ಜತೆಗೆ ಸ್ಥಳೀಯವಾಗಿಯೇ ಸ್ವಯಂ ಉದ್ಯೋಗ ಮಾಡಬಹುದು’ ಎನ್ನುತ್ತಾರೆ ಅಧಿಕಾರಿಗಳು.
ಪಿಡಿಇ ಹುದ್ದೆಗಳಿಗೆ ಮೀಸಲಾತಿ ಸಿಗುವ ನಿರೀಕ್ಷೆ
ಇಲ್ಲಿ ಬಿಎ ಬಿಎಸ್‌ಸಿ ಬಿಕಾಂ ಬಿಸಿಎ ಎಂಎ ಎಂಎಸ್‌ಸಿ ಎಂಕಾಂ ಎಂಪಿಎಚ್ ಎಂಎಸ್‌ಡಬ್ಲ್ಯು ಹೀಗೆ ಯಾವುದೇ ವಿಷಯ ಕಲಿಯುವ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಕೃಷಿ ಪಂಚಾಯತ್‌ರಾಜ್ ಸ್ಕಿಲ್ ಡೆವಲಪ್‌ಮೆಂಟ್ ವಿಷಯಗಳನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಷಯ ಕಲಿತವರಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯಲ್ಲಿ ಇಂತಿಷ್ಟು ಮೀಸಲಾತಿ ನಿಗದಿಪಡಿಸಬೇಕು ಎಂಬ ಬೇಡಿಕೆ ವಿದ್ಯಾರ್ಥಿಗಳದ್ದಾಗಿದೆ ಈ ವಿಷಯ ಸರ್ಕಾರದ ಮಟ್ಟದಲ್ಲಿದ್ದು ಅದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಅವರು ವರದಿ ಕೊಟ್ಟ ನಂತರ ಅವಕಾಶ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಪ್ರೊ. ಎಸ್.ವಿ.ನಾಡಗೌಡರ. ಸಂಪರ್ಕಕ್ಕೆ: 77951 00729 79752 02206.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.