
ಗಜೇಂದ್ರಗಡ: ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಜ.7ರಿಂದ ಜ.17ರವರೆಗೆ ವಿಶೇಷ ಕರವಸೂಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಗಳು, ಸಿಬ್ಬಂದಿ, ಆಡಳಿತ ಮಂಡಳಿಯವರು ಅಭಿಯಾನದಲ್ಲಿ ಭಾಗವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲಿ ಮಾಡಿ ಅಭಿಯಾನದ ಯಶಸ್ವಿಗೆ ಶ್ರಮಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರ ಸೂಚಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಬೇಕು. ಸದರಿ ಮಾಹಿತಿಯು ಪಂಚತಂತ್ರ 2.0 ತಂತ್ರಾಂಶದಲ್ಲಿ ಲಭ್ಯವಿದ್ದು, ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಜ.17ರೊಳಗೆ ಕರ ವಸೂಲಿ ಮಾಡಿಸಬೇಕು. ತೆರಿಗೆ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ಹಾಗೂ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೂ ನೋಟಿಸ್ ನೀಡಿ ಶೇ 100ರಷ್ಟು ಬಾಕಿ ವಸೂಲಿ ಮಾಡಬೇಕು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸ್ವಚ್ಛ ವಾಹಿನಿ ಮತ್ತು ಡಂಗೂರ ಸಾರುವ ಮೂಲಕ ಅಭಿಯಾನದ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಪ್ರಚಾರದ ಜೊತೆಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಆಯಾ ವಾರ್ಡ್‌ವಾರು ಜನರ ಮನವೊಲಿಸಿ ತೆರಿಗೆ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎರಡನೇ ಶನಿವಾರ ಮತ್ತು ಭಾನುವಾರ ರಜೆ ಮಾಡದೆ ಕರವಸೂಲಿ ಮಾಡಬೇಕು. ಜ.15 ರಂದು ಮಕರ ಸಂಕ್ರಾಂತಿಗೆ ರಜೆ ನೀಡಲಾಗಿದೆ. ಅಭಿಯಾನದ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿಗಳು ರಜೆ ಪಡೆಯುವಂತಿಲ್ಲ. ಅನಧಿಕೃತವಾಗಿ ಗೈರು ಹಾಜರಾದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.