
ಗದಗ: ‘ಕ್ಷತ್ರಿಯ ಗುಣಗಳಿರುವ ಸಹಸ್ರಾರ್ಜುನ ಸಮಾಜ ಸ್ನೇಹಕ್ಕೂ ಸಿದ್ಧ; ಸಮರಕ್ಕೂ ಬದ್ಧ ಎನ್ನುವ ಪ್ರವೃತ್ತಿ ಹೊಂದಿದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಸಮಾಜದ ಪಾತ್ರ ದೊಡ್ಡದು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಹಳೇ ಸರಾಫ್ ಬಜಾರ್‌ನಲ್ಲಿ ಬುಧವಾರ ನಡೆದ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದ ಮೆರವಣಿಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಅದ್ದೂರಿಯಾಗಿ ನೆರವೇರಿದೆ. ಸಹಸ್ರಾರ್ಜುನ ಅವತಾರ ನೂರು ಅರ್ಜುನರನ್ನು ಕಾಣುವ ಶಕ್ತಿ ಹೊಂದಿದೆ. ಈ ಸಮುದಾಯ ಉತ್ತರ ಭಾರತದಿಂದ ಬಂದು ರಾಜ್ಯದ ಬೆಂಗಳೂರು, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೆಲೆಸಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಎಸ್‌ಎಸ್‌ಕೆ ಸಮಾಜದವರು ರೇಷ್ಮೆ ಕೆಲಸ ಮಾಡುವ ಉದ್ಯೋಗದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಯಾವುದೇ ಕೆಲಸ ಮಾಡಿದರೂ ಯಶಸ್ಸು ಕಾಣುತ್ತಾರೆ. ಉದ್ಯಮದಲ್ಲಿ ಬಹಳ ಬೇಗ ಪ್ರಗತಿ ಕಾಣುತ್ತಾರೆ. ಇದು ಈ ಸಮಾಜದವರಿಗೆ ಸಿಕ್ಕಿರುವ ವರ’ ಎಂದು ಹೇಳಿದರು.
ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಎಸ್‌ಎಸ್‌ಕೆ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಇದ್ದರು.
ಗದುಗಿನ ಸಹಸ್ರಾರ್ಜುನ ಸಮಾಜದ ಮುಖಂಡರು ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದಾರೆ. ಈ ಸಮಾಜಕ್ಕೆ ಸೇರಿದವರು ಶಕ್ತಿಶಾಲಿಗಳು. ಹಾಗೆಯೇ ನ್ಯಾಯ ಪ್ರೀತಿಗೆ ಹೆಸರುವಾಸಿಬಸವರಾಜ ಬೊಮ್ಮಾಯಿ ಸಂಸದ
ಕಂಚಿನ ಪುತ್ಥಳಿ ಸ್ಥಾಪನೆಗೆ ಆಗ್ರಹ
ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯ ಬೆಟಗೇರಿ ಹೆಲ್ತ್‌ಕ್ಯಾಂಪ್ ಹತ್ತಿರ ಸಹಸ್ರಾರ್ಜುನ ಮಹಾರಾಜರ ವೃತ್ತ ಇದ್ದು ಅಲ್ಲಿ ಕಂಚಿನ ಪುತ್ಥಳಿ ಸ್ಥಾಪನೆಗೆ ಸರ್ಕಾರ ಕ್ರಮವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣ ನಾ. ರಾಯಭಾಗಿ ಆಗ್ರಹಿಸಿದ್ದಾರೆ. ಸಹಸ್ರಾರ್ಜುನ ಮಹಾರಾಜರು ಎಸ್‌ಎಸ್‌ಕೆ ಸಮಾಜದ ಮೂಲ ಪುರುಷರು. ಸಹಸ್ರಾರ್ಜುನ ಮಹಾರಾಜರ ಹೆಸರಿನಲ್ಲಿ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಸರ್ಕಲ್ ಇಲ್ಲ. ಬೆಟಗೇರಿಯಲ್ಲಿ ಸಹಸ್ರಾರ್ಜುನ ವೃತ್ತ ಇರುವುದು ಎಲ್ಲರಿಗೂ ಹೆಮ್ಮೆ ತರುವ ವಿಷಯ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಈ ಸರ್ಕಲ್ ಬಗ್ಗೆ ಕಾಳಜಿ ವಹಿಸಿ ಶೀಘ್ರದಲ್ಲೇ ನಗರಸಭೆ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಸುಂದರವಾದ ಸಹಸ್ರಾರ್ಜುನ ಮಹಾರಾಜರ ಕಂಚಿನ ಮೂರ್ತಿ ಮಾಡಿಸಿ ವೃತ್ತದಲ್ಲಿ ಪ್ರತಿಷ್ಠಾಪಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.