
ಗದಗ: ‘ಮಕ್ಕಳು ಯಾವ ವಿಷಯದ ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ವಿಶ್ಲೇಷಿಸಿ, ಅದನ್ನು ಸರಿಪಡಿಸಲು ನಿರ್ದಿಷ್ಟ ಕಾರ್ಯಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಾಗೂ ಗದಗ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
‘ಎಸ್‌ಎಸ್‌ಎಲ್‌ಸಿಯಲ್ಲಿ ಗುಣಾತ್ಮಕ ಫಲಿತಾಂಶ ತರುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಶೇಕಡಾವಾರು ಹೆಚ್ಚಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಅವಶ್ಯಕ’ ಎಂದು ತಿಳಿಸಿದರು.
‘ಶಾಲಾ ಮಟ್ಟದಲ್ಲಿ ನಿಯಮಿತ ಪರೀಕ್ಷೆಗಳು, ಮರುಪಠಣ ತರಗತಿಗಳು ಹಾಗೂ ಪೋಷಕರೊಂದಿಗೆ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹೆಚ್ಚಿಸಬೇಕು. ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಉತ್ತರ ಪತ್ರಿಕೆ ವಿಶ್ಲೇಷಣೆ ಮೂಲಕ ವಿದ್ಯಾರ್ಥಿಗಳ ತಪ್ಪುಗಳನ್ನು ಸರಿಪಡಿಸಲು ಕ್ರಮವಹಿಸಬೇಕು. ಡಿಜಿಟಲ್ ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳ ಪರಿಣಾಮಕಾರಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಂದು ಶಾಲೆಯೂ ಫಲಿತಾಂಶ ಆಧಾರಿತ ಕಾರ್ಯಯೋಜನೆ ರೂಪಿಸಬೇಕು’ ಎಂದು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಎಸ್. ಬುರುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶ ವಿವರಿಸಿದರು.
ಧಾರವಾಡದ ಹೆಚ್ಚುವರಿ ಆಯುಕ್ತರ ಕಚೇರಿ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಈಶ್ವರ ನಾಯಕ, ಡಯಟ್ ಪ್ರಾಚಾರ್ಯ ಜಿ.ಎಂ.ಮುಂದಿನಮನಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು, ಸಮನ್ವಯಾಧಿಕಾರಿಗಳು, ಡಯಟ್ ಉಪನ್ಯಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳು ಇದ್ದರು.
ಸಂವಾದದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಭಾಗವಹಿಸಿದ್ದರು.
ಫಲಿತಾಂಶ ಹೆಚ್ಚಿಸುವುದು ಶಿಕ್ಷಕರ ಸಮೂಹ ಜವಾಬ್ದಾರಿ ವಿಷಯವಾರು ಗುರಿ ನಿಗದಿ ಮಾಡಿ ನಿಯಮಿತ ಅಭ್ಯಾಸ ಪರೀಕ್ಷೆ ನಡೆಸಿ ಹಾಜರಾತಿ ಹೆಚ್ಚಿಸಲು ಪೋಷಕರೊಂದಿಗೆ ನಿರಂತರ ಸಂಪರ್ಕ
ಶಿಕ್ಷಕರು ಸಮಯ ಪಾಲನೆ ಬದ್ಧತೆ ಮತ್ತು ಗುಣಮಟ್ಟದ ಬೋಧನೆಗೆ ಆದ್ಯತೆ ನೀಡಬೇಕು. ಜಿಲ್ಲೆಯ ಪ್ರತಿಯೊಂದು ಶಾಲೆಯೂ ಫಲಿತಾಂಶ ಸುಧಾರಣೆಗೆ ಸಮಗ್ರ ಪ್ರಯತ್ನ ಕೈಗೊಳ್ಳಬೇಕುಈಶ್ವರ ಉಳ್ಳಾಗಡ್ಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.