ADVERTISEMENT

ಗೊಬ್ಬರಕ್ಕಾಗಿ ಪರದಾಟ | ರೈತರ ನೆರವಿಗೆ ಬಾರದ ಕಾಂಗ್ರೆಸ್‌ ಸರ್ಕಾರ: ವೆಂಕನಗೌಡ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 5:22 IST
Last Updated 26 ಜುಲೈ 2025, 5:22 IST
ವೆಂಕನಗೌಡ ಗೋವಿಂದಗೌಡ್ರ
ವೆಂಕನಗೌಡ ಗೋವಿಂದಗೌಡ್ರ   

ಗದಗ: ‘ಬಿತ್ತನೆ ಆದ ಮೇಲೆ ಉತ್ತಮ ಮಳೆ ಆಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ, ಸಹಾಯ ಸಹಕಾರ ಬೇಕಾದ ಈ ಸಮಯದಲ್ಲಿ ಕೈಬಿಟ್ಟಿರುವ ಕಾಂಗ್ರೆಸ್‌ ಸರ್ಕಾರ, ಕೇವಲ ಮಾತಿನಲ್ಲಿ ಮಾತ್ರ ರೈತರ ನೆರವಿಗೆ ಬಂದಂತೆ ನಾಟಕವಾಡುತ್ತಿದೆ’ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಸರ್ಕಾರವನ್ನು ಟೀಕಿಸಿದ್ದಾರೆ.

‘ಈ ಮೊದಲು ಬಿತ್ತನೆ ಬೀಜಕ್ಕಾಗಿ ಅಲೆದಾಡಿದ ರೈತರು ಈಗ ಹಗಲು, ರಾತ್ರಿ, ಬಿಸಿಲು, ಮಳೆ, ಚಳಿ ಎನ್ನದೆ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದಾರೆ. ರೈತರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಈ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ’ ಎಂದು ದೂರಿದ್ದಾರೆ.

‘ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಕಾಲಹರಣ ಮಾಡುವುದರ ಬದಲಾಗಿ ಗೊಬ್ಬರದ ಕಳ್ಳ ದಾಸ್ತಾನು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿ ರಸಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ವಿತರಿಸುವ ಕೆಲಸ ಮಾಡಬೇಕು. ರೈತರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿರುವ ಸರ್ಕಾರ ತನ್ನ ನಡೆ ಬದಲಿಸಿಕೊಳ್ಳಬೇಕು. ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು. ಅವರಿಗೆ ಬೇಕಿರುವ ರಸಗೊಬ್ಬರವನ್ನು ಸಮರ್ಪಕವಾಗಿ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ರೈತರು ದಂಗೆ ಹೇಳುವ ಮೊದಲು ರಾಜ್ಯ ಸರ್ಕಾರ ಈ ಕೆಲಸ ಮಾಡಬೇಕು. ಒಂದು ವೇಳೆ ಇದೇ ಧೋರಣೆ ಮುಂದುವರಿಸಿದರೆ ರೈತರ ಕೋಪಕ್ಕೆ ಈ ಸರ್ಕಾರ ಗುರಿಯಾಗಲಿದೆ. ಮುಂದೆ ಅದರ ಬಿಸಿ ಸರ್ಕಾರಕ್ಕೆ ಮುಟ್ಟಲಿದೆ’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.