ADVERTISEMENT

ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿ: ಗಿರೀಶ ಮರಡಿ ಸಲಹೆ

ಮೆಕ್ಸಿಕನ್ ಬಿನ್ಸ್ ಬೆಳೆಗಾರರ ಕಾರ್ಯಾಗಾರ: ವಾಲ್ಮೀ ನಿರ್ದೇಶಕ ಗಿರೀಶ ಮರಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:40 IST
Last Updated 23 ಜನವರಿ 2026, 8:40 IST
ಗದಗ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಾಗಾರವನ್ನು ಐ. ಪ್ರಕಾಶ್‌ ಉದ್ಘಾಟಿಸಿದರು
ಗದಗ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಾಗಾರವನ್ನು ಐ. ಪ್ರಕಾಶ್‌ ಉದ್ಘಾಟಿಸಿದರು   

ಗದಗ: ‘ಸುಸ್ಥಿರ ಕೃಷಿಗಾಗಿ ರೈತರು ಪಶುಸಂಗೋಪನೆ, ಅರಣ್ಯ ಕೃಷಿ, ಕೊಯ್ಲೋತ್ತರ ನಿರ್ವಹಣೆ ಹಾಗೂ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ವಾಲ್ಮೀ ಸಂಸ್ಥೆಯ ನಿರ್ದೇಶಕ ಗಿರೀಶ ಮರಡಿ ಹೇಳಿದರು.

ಧಾರವಾಡದ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮತ್ತು ನೆಟಾಫಿಮ್-ಎಂ.ಇ.ಐ.ಎಲ್ ಸಹಯೋಗದಲ್ಲಿ ತಾಲ್ಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಮೆಕ್ಸಿಕನ್ ಬಿನ್ಸ್ ಬೆಳೆದ ಬೆಳೆಗಾರರಿಗೆ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನೀರು ಮತ್ತು ಭೂಮಿಯ ಸಂರಕ್ಷಣೆ ರೈತರ ಕರ್ತವ್ಯವಾಗಿದ್ದು, ಹನಿ ನೀರಾವರಿ ಯೋಜನೆಗಳು ರೈತರಿಗೆ ದಾರಿದೀಪವಾಗಿವೆ. ಅವುಗಳ ಸದುಪಯೋಗ ಪಡೆಯುವುದರ ಜತೆಗೆ ಮಣ್ಣು ಪರೀಕ್ಷೆಯ ಮಹತ್ವವನ್ನು ರೈತರು ಅರಿತುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಸ್‍ಎಲ್‍ಐಎಸ್ ವಿಭಾಗ-1ರ ಮುಂಡರಗಿ ಕಾರ್ಯನಿರ್ವಾಹಕ ಎಂಜಿನಿಯರ್‌ ಐ. ಪ್ರಕಾಶ್ ಮಾತನಾಡಿ, ‘ಸರ್ಕಾರದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಾದ ಸಿಂಗಟಾಲೂರು ಹನಿ ನೀರಾವರಿ ಯೋಜನೆಗಳು ಆಧುನಿಕ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ರೈತರ ಹೊಲಗಳಲ್ಲಿ ಅಳವಡಿಸಿರುವ ಹನಿ ನೀರಾವರಿ ಸಲಕರಣೆಗಳನ್ನು ರಕ್ಷಿಸಿ ಸರಿಯಾಗಿ ಬಳಸುವುದು ರೈತರ ಜವಾಬ್ದಾರಿಯಾಗಿದೆ’ ಎಂದರು.

ಯೋಜನೆಯ ಫಲಾನುಭವಿ ರೈತರು ಹನಿ ನೀರಾವರಿಗೆ ಸೂಕ್ತವಾದ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.

ನೆಟಾಫಿಮ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಿರೀಶ್ ದೇಶಪಾಂಡೆ, ‘ಯೋಜನಾ ಪ್ರದೇಶದಲ್ಲಿ ಹೆಚ್ಚಿನ ರೈತರು ಹನಿ ನೀರಾವರಿಯಲ್ಲಿ ಮೆಕ್ಸಿಕನ್ ಬಿನ್ಸ್ ಬೆಳೆಯುತ್ತಿದ್ದು, ಇದರ ಲಾಭದ ಪ್ರಮಾಣವು ಮೆಕ್ಕೆಜೋಳ ಹಾಗೂ ಹೆಸರು ಬೆಳೆಗಳಿಗಿಂತ ಹೆಚ್ಚಾಗಿದೆ’ ಎಂದರು.

‘ಸದ್ಯ ಈ ಕಾಳುಗಳನ್ನು ಕ್ಯಾಲಿಫೋರ್ನಿಯಾ ಹೋಟೆಲ್‍ಗಳಲ್ಲಿ ಆಹಾರ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತಿದ್ದು, ವರ್ಷಕ್ಕೆ ಸುಮಾರು 400 ಟನ್ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಯೋಜನಾ ಪ್ರದೇಶದ ರೈತರು ಹೆಚ್ಚಿನ ಪ್ರಮಾಣದಲ್ಲಿ ಈ ಬೆಳೆಯನ್ನು ಬೆಳೆದು ಲಾಭ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

ಮೆಕ್ಸಿಕನ್ ಬಿನ್ಸ್ ಬೆಳೆದ ರೈತರ ಯಶೋಗಾಥೆ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.

ನಂತರ ಲಕ್ಕುಂಡಿ ಗ್ರಾಮದಲ್ಲಿ ಹನಿ ನೀರಾವರಿ ಅಡಿಯಲ್ಲಿ ಬೆಳೆದ ಮೆಕ್ಸಿಕನ್ ಬಿನ್ಸ್ ಹೊಲಗಳಿಗೆ ಕ್ಷೇತ್ರ ಭೇಟಿ ನೀಡಿ ರೈತರು ಹೆಚ್ಚಿನ ಪ್ರಾಯೋಗಿಕ ಜ್ಞಾನವನ್ನು ಪಡೆದರು.

ಬೇಸಾಯ ಶಾಸ್ತ್ರಜ್ಞ ಆನಂದ ಆಲೂರು ನಿರೂಪಣೆ ಮಾಡಿದರು. ಎಇಇ ಮಲ್ಲಿಕಾರ್ಜುನ ಜಾಲನ್ನವರ, ಎಇ ಬಸವರಾಜ್ ಕಡೆಮನಿ, ಕೆವಿಕೆ ಮುಖ್ಯಸ್ಥೆ ಸುಧಾ ಮಂಕಣಿ, ರಾಹುಲ್ ರಾಜನ್, ಗುಂಡೂರಾವ್‌ ಕುಲಕರ್ಣಿ, ರವಿರಾಜಗೌಡ ಪಾಟೀಲ್, ಪ್ರಮೋದ ನಾಯ್ಕರ, ಸುರೇಶ ಕವಲೂರ ಹಾಗೂ ಅನೇಕ ಮಂದಿ ರೈತರು ಭಾಗವಹಿಸಿದ್ದರು.

Quote - ಮೆಕ್ಸಿಕನ್ ಬಿನ್ಸ್ ಕಡಿಮೆ ಅವಧಿಯಲ್ಲಿ ಬೆಳೆಯುವ ದ್ವಿದಳ ಧಾನ್ಯವಾಗಿದ್ದು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಹನಿ ನೀರಾವರಿಯ ಮೂಲಕ ಬೆಳೆಯಬಹುದು. ಉತ್ತಮ ಇಳುವರಿಗೆ ನೀರು ಗೊಬ್ಬರ ಹಾಗೂ ಕೀಟ ನಿರ್ವಹಣೆ ಮುಖ್ಯವಾಗಿದೆ –ಉಮೇಶ್‌ ಬೇಸಾಯ ಶಾಸ್ತ್ರಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.