ಗದಗ: ‘ರಾಜ್ಯದಲ್ಲಿನ 57 ಲಕ್ಷ ವಿದ್ಯಾರ್ಥಿಗಳ ಮುಖ ಚಹರೆ ಆಧರಿಸಿ ಆನ್‌ಲೈನ್ ಹಾಜರಾತಿ ವ್ಯವಸ್ಥೆಯು ಶೀಘ್ರವೇ ಜಾರಿಯಾಗಲಿದೆ. ಸರ್ಕಾರಿ ಶಾಲೆಗಳಲ್ಲಿ ಶೇ 97ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇರುವಂತೆ ಶಿಕ್ಷಕರು ನೋಡಿಕೊಳ್ಳಬೇಕು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಶಿಕ್ಷಕರ ಮುಖ ಚಹರೆ ಹಾಜರಾತಿ ‘ಪ್ರತ್ಯಕ್ಷ’ ಯೋಜನೆಗೆ ಚಾಲನೆ ನೀಡಿದ ಅವರು, ‘ಶಾಲಾ ಶಿಕ್ಷಕರ ಆನ್‌ಲೈನ್ ಹಾಜರಾತಿ ಅಗತ್ಯವಿದೆ. ಇದೇ ಪ್ರಕ್ರಿಯೆ ರಾಜ್ಯದಾದ್ಯಂತ ನಡೆಯಲಿದೆ’ ಎಂದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಮುಖ್ಯಮಂತ್ರಿಯವರು ಬಜೆಟ್ ಭಾಷಣದಲ್ಲಿ ಹೇಳಿದಂತೆ ರಾಜ್ಯದಲ್ಲಿ ಶಿಕ್ಷಕರು ಮತ್ತು ಇಲಾಖೆ ಸಿಬ್ಬಂದಿಯ ಆನ್‌ಲೈನ್ ಹಾಜರಾತಿಗೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಖೊಟ್ಟಿ ಹಾಜರಾತಿಗೆ ಕೊಕ್ಕೆ ಬೀಳಲಿದೆ’ ಎಂದರು.
‘ಶಾಲೆ ತಲುಪಿದ ಬಳಿಕ ಶಿಕ್ಷಕರು ಆನ್‌ಲೈನ್ ಹಾಜರಾತಿ ಹಾಕಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗೆ ಬರುತ್ತಾರೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೆರವಾಗಲಿದೆ. ಜಿಲ್ಲೆಯ ಶಿಕ್ಷಕರು, ಸಿಬ್ಬಂದಿ ಸೇರಿ ಒಟ್ಟು 4,789 ಮಂದಿ ಆನ್‌ಲೈನ್ ಹಾಜರಾತಿಗೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು.
ಶಾಸಕ ಜಿ.ಎಸ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕ ಡಾ.ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಸಿಇಒ ಭರತ್ ಎಸ್., ಡಿಡಿಪಿಐ ಆರ್.ಎಸ್.ಬುರುಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.