ADVERTISEMENT

ಶಿಕ್ಷಕರೇ, ತಂತ್ರಜ್ಞಾನದ ಬಳಕೆ ಕಲಿಯಿರಿ

ಗದಗ: ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಶಾಸಕ ಎಚ್‌.ಕೆ. ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 16:24 IST
Last Updated 5 ಸೆಪ್ಟೆಂಬರ್ 2020, 16:24 IST
ಗದಗ ನಗರದ ಕನ್ನಡ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಾಸಕ ಎಚ್‌.ಕೆ. ಪಾಟೀಲ, ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್‌ ಕೆ. ಇದ್ದಾರೆ
ಗದಗ ನಗರದ ಕನ್ನಡ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಾಸಕ ಎಚ್‌.ಕೆ. ಪಾಟೀಲ, ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್‌ ಕೆ. ಇದ್ದಾರೆ   

ಗದಗ: ‘ತಂತ್ರಜ್ಞಾನದ ಮೂಲಕ ಶಿಕ್ಷಣ ಎಂಬುದು ಈಗಿನ ಮಂತ್ರ. ಎಲ್ಲ ಶಿಕ್ಷಕರೂ ತಂತ್ರಜ್ಞಾನ ಅರ್ಥೈಸಿಕೊಂಡು ಅದನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು. ಹೊಸ ಮಾಧ್ಯಮಗಳ ಅರಿವು ಇಲ್ಲದಿದ್ದರೆ ಶಿಕ್ಷಕರೂ ಕೂಡ ಅನಕ್ಷರಸ್ಥರೇ’ ಎಂದು ಶಾಸಕ ಎಚ್‌.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಿನ ಕಾಲದಲ್ಲಿ ಶಿಕ್ಷಕರನ್ನು ಕಂಪ್ಯೂಟರ್‌ಗಳಿಗೆ ಹೋಲಿಸಬಹುದು. ಹತ್ತು ವರ್ಷಗಳು ಕಳೆದರೆ ಎಲ್ಲ ಕಂಪ್ಯೂಟರ್‌ಗಳೂ ಔಟ್‌ಡೇಟೆಡ್‌ ಆಗುತ್ತವೆ. ಅದೇರೀತಿ, ಸರ್ಕಾರಿ ಶಾಲೆಗಳಲ್ಲಿರುವ ಬಹಳಷ್ಟು ಹಳೆಯ ಶಿಕ್ಷಕರು ಇಂದಿಗೂ ಔಟ್‌ಡೇಟೆಡ್ಡೇ ಆಗಿದ್ದಾರೆ. ಕೋವಿಡ್‌–19 ಕಾಲದಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಅಣಿಯಾಗಿ ಅಂತ ಹೇಳಿದರೆ ಅನೇಕ ಶಿಕ್ಷಕರು ಗಾಬರಿ ಬೀಳುತ್ತಾರೆ. ಹಾಗಾಗಿ, ಎಲ್ಲ ಶಿಕ್ಷಕರೂ ಹೊಸ ವ್ಯವಸ್ಥೆಗೆ ಬದಲಾಗಬೇಕು’ ಎಂದು ಹೇಳಿದರು.

ADVERTISEMENT

‘ಈ ಹಿಂದೆ ಗದಗ ಜಿಲ್ಲಾಧಿಕಾರಿಯಾಗಿದ್ದ ಪ್ರಸನ್ನ ಕುಮಾರ್‌ ಜಿಲ್ಲೆಯ ಶೈಕ್ಷಣಿಕ ಮಟ್ಟದ ಸತ್ಯ ದರ್ಶನ ಮಾಡಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಶೈಕ್ಷಣಿಕ ಮಟ್ಟವನ್ನು ಮೇಲೆತ್ತಲು ಶಿಕ್ಷಣ ಇಲಾಖೆ ಶ್ರಮಿಸಬೇಕು. ತಂತ್ರಜ್ಞಾನ ಅರ್ಥೈಸಿಕೊಳ್ಳುವ ಬಗ್ಗೆ ಜಿಲ್ಲಾಡಳಿತ ಶಿಕ್ಷಕರಿಗೆ ಸ್ಟಾರ್ಟ್‌ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು. ಶಿಕ್ಷಕರು ಅವುಗಳನ್ನು ಶ್ರದ್ಧೆಯಿಂದ ಕಲಿಯಬೇಕು. ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 20ರೊಳಗಿನ ಸ್ಥಾನ ಪಡೆಯುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಕೇವಲ ಶಿಕ್ಷಕರಷ್ಟೇ ಅಲ್ಲ; ಜಗತ್ತಿನ ಅತ್ಯಂತ ಶ್ರೇಷ್ಠ ವೇದಾಂತಿ ಕೂಡ ಹೌದು. ಅವರ ಮಹಾನ್ ವ್ಯಕ್ತಿತ್ವವೇ ನಮ್ಮೆಲ್ಲರಿಗೂ ಸ್ಫೂರ್ತಿ. ಪ್ರತಿವರ್ಷ ಸಂ‍ಪ್ರದಾಯಬದ್ಧವಾಗಿ ಶಿಕ್ಷಕರ ದಿನ ಆಚರಿಸುವುದರಿಂದ ಏನೂ ಪ್ರಯೋಜನವಿಲ್ಲ. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಹೇಳಿದರು.

‘ದೇಶದ ನಾಗರಿಕರು 21ನೇ ಶತಮಾನದ ಶ್ರೇಷ್ಠ ರಾಷ್ಟ್ರಕ್ಕೆ ಸಿದ್ಧಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಇದರಿಂದ ಬಹುದೊಡ್ಡ ಬದಲಾವಣೆ ಆಗಲಿದೆ. ಅದನ್ನು ಎಲ್ಲ ಶಿಕ್ಷಕರೂ ಅರ್ಥೈಸಿಕೊಂಡು ಹೊಸ ನೀತಿಗೆ ಹೊಂದಿಕೊಳ್ಳಬೇಕು’ ಎಂದರು.

ಆರ್‌ಐಡಿಎಫ್ ನಬಾರ್ಡ್-25ರ ಅಡಿಯಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗದಗ ತಾಲ್ಲೂಕಿನ 10 ಪ್ರಾಥಮಿಕ ಹಾಗೂ 4 ಪ್ರೌಢಶಾಲೆಗಳ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಗುಣಮಟ್ಟದ ಜೊತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಿಇಒ ಡಾ.ಆನಂದ್ ಕೆ., ಸಿದ್ಧಲಿಂಗೇಶ್ವರ ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ, ಡಯೆಟ್ ಉಪನಿರ್ದೇಶಕ ಎಸ್.ಡಿ.ಗಾಂಜಿ ಇದ್ದರು.

ನಮ್ಮೆಲ್ಲರಿಗೂ ದಾರಿದೀಪ: ಸಿ.ಸಿ. ಪಾಟೀಲ

‘ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞರಾಗಿದ್ದರಲ್ಲದೇ, ಸಾರ್ಥಕ ಜೀವನ ನಡೆಸಿ ನಮ್ಮೆಲ್ಲರಿಗೂ ದಾರಿದೀಪ ಆಗಿದ್ದಾರೆ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಅವರು ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿಕ್ಷಕರಿಗೆ ಸಂದೇಶ ನೀಡಿದರು.

‘ರಾಜ್ಯ ಸರ್ಕಾರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲೆಯ 698 ಶಾಲೆಗಳಿಗೆ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಕಲ್ಪಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.