ADVERTISEMENT

ಮುಂಡರಗಿ: ಮೀನುಗಾರರೆಂಬ ಶವ ಶೋಧಕ ಆಪದ್ಭಾಂದವರು

ದುಡಿಮೆ ಬಿಟ್ಟು ನೊಂದವರಿಗೆ ನೆರವಾಗುವ ಮೀನುಗಾರರಿಗೆ ಬೇಕಿದೆ ನೆರವಿನ ಹಸ್ತ

ಕಾಶಿನಾಥ ಬಿಳಿಮಗ್ಗದ
Published 12 ಏಪ್ರಿಲ್ 2025, 7:45 IST
Last Updated 12 ಏಪ್ರಿಲ್ 2025, 7:45 IST
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಶವ ಶೋಧದಲ್ಲಿ ತೊಡಗಿರುವ ಮೀನುಗಾರರ ತಂಡ
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಶವ ಶೋಧದಲ್ಲಿ ತೊಡಗಿರುವ ಮೀನುಗಾರರ ತಂಡ   

ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹತ್ತಿರ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಜತೆಗೆ ನದಿಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಅಥವಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ.

ಇಂತಹ ಸಂದರ್ಭದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು ಅಥವಾ ಕಾಲುಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟವರ ಶವ ಶೋಧನೆ ಕಾರ್ಯ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವರ್ಷದಲ್ಲಿ ಕನಿಷ್ಠ 8-10 ತಿಂಗಳು ತುಂಗಭದ್ರಾ ನದಿಯಲ್ಲಿ ಸತತವಾಗಿ ನೀರು ಹರಿಯುತ್ತಿರುತ್ತದೆ. ಹೀಗಾಗಿ ಆತ್ಮಹತ್ಯೆಗೆ ನಿರ್ಧರಿಸಿದವರು ಇಲ್ಲಿನ ಸೇತುವೆ ಬಳಿಗೆ ಬರುತ್ತಾರೆ. ಸೇತುವೆಯ ಮಧ್ಯಭಾಗದಿಂದ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಕೆಲವರು ಈಜಲು ಹೋಗಿ ನೀರು ಪಾಲಾಗುತ್ತಾರೆ.

ADVERTISEMENT

ಕೊರ್ಲಹಳ್ಳಿ ಗ್ರಾಮವು ತುಂಗಭದ್ರಾ ನದಿಯ ಪಕ್ಕದಲ್ಲಿದ್ದು, ಗ್ರಾಮದ ಬಹುತೇಕ ಮೀನುಗಾರರು ನದಿಯಲ್ಲಿಳಿದು ಮೀನುಗಾರಿಕೆ ಮಾಡುತ್ತಾರೆ. ಇಲ್ಲಿ ಸಿಕ್ಕ ಮೀನುಗಳನ್ನು ಸೇತುವೆಯ ಬಳಿ ಮಾರಾಟ ಮಾಡುತ್ತಾರೆ. ಈ ಕಾರಣದಿಂದ ಗ್ರಾಮದ ಬಹುತೇಕ ಮೀನುಗಾರ ಯುವಕರು ನದಿ ದಂಡೆಯಲ್ಲಿ ಠಿಕಾಣಿ ಹೂಡಿರುತ್ತಾರೆ.

ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆಯ ಮೇಲಿಂದ ನದಿಗೆ ಜಿಗಿದರೆ ಅಥವಾ ಯಾರಾದರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರೆ ಮೊದಲು ವಿಷಯ ಗೊತ್ತಾಗುವುದೇ ಮೀನುಗಾರರಿಗೆ. ಒಬ್ಬ ವ್ಯಕ್ತಿ ನೀರಿಗೆ ಹಾರಿದ ತಕ್ಷಣ ಅಲ್ಲಿದ್ದ ಮೀನುಗಾರರೆಲ್ಲ ನದಿ ದಡದಲ್ಲಿರುವ ತಮ್ಮ ತೆಪ್ಪದ ಸಮೇತ ನೀರಿಗಿಳಿಯುತ್ತಾರೆ. ಶತಾಯ ಗತಾಯ ನದಿಗೆ ಹಾರಿದವನ್ನು ಬದುಕಿಸಲು ಹರಸಾಹಸ ಪಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿರುವವರನ್ನು ಬದುಕಿಸಿರುವ ಹಲವಾರು ಘಟನೆಗಳು ಇಲ್ಲಿ ನಡೆದಿವೆ.

ಆಕಸ್ಮಾತ್ ನದಿಗೆ ಹಾರಿದವನು ನೀರಿನಲ್ಲಿ ಮುಳುಗಿ ಸತ್ತರೆ ಅವನ ಶವ ಶೋಧಿಸುವುದು ಪೊಲೀಸರಿಗೆ, ಅಗ್ನಿಶಾಮಕದಳದ ಸಿಬ್ಬಂದಿಗೆ ಹಾಗೂ ಕುಟುಂಬದ ಸದಸ್ಯರಿಗೆ ದೊಡ್ಡ ಸವಾಲಿನ ಕೆಲಸವಾಗುತ್ತದೆ. ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯ ಶವ ಸಾಮಾನ್ಯವಾಗಿ 24 ಗಂಟೆಗಳ ನಂತರ ಮೇಲೇಳುತ್ತದೆ. ಅದನ್ನು ಹುಡುಕಿ ಮೇಲೆ ತರುವುದು ತುಂಬಾ ಕಷ್ಟದ ಕೆಲಸವಾಗಿದೆ.

ಇಂತಹ ಸಂದರ್ಭದಲ್ಲಿ ಹುಲುಗಪ್ಪ ಶಿಳ್ಳಿಕ್ಯಾತರ, ನಾಗಪ್ಪ ಶಿಳ್ಳಿಕ್ಯಾತರ, ಮಂಜುನಾಥ ಶಿಳ್ಳಿಕ್ಯಾತರ, ಯಲ್ಲಪ್ಪ ಶಿಳ್ಳಿಕ್ಯಾತರ, ಯಮುನಪ್ಪ ಶಿಳ್ಳಿಕ್ಯಾತರ, ಪರಸಪ್ಪ ಶಿಳ್ಳಿಕ್ಯಾತರ, ಬಸವಂತ ಶಿಳ್ಳಿಕ್ಯಾತರ, ರಂಗಪ್ಪ, ಮಹೇಶ ಶಿಳ್ಳಿಕ್ಯಾತರ ಮೊದಲಾದವರು ತಕ್ಷಣ ನೆರವಿಗೆ ಧಾವಿಸುತ್ತಾರೆ. ವ್ಯಕ್ತಿ ಎಲ್ಲಿ ಮುಳುಗಿ ಸತ್ತರೆ ಅವನ ಮೃತದೇಹ ಯಾವಾಗ, ಎಲ್ಲಿ ದೊರೆಯುತ್ತದೆ ಎನ್ನುವುದನ್ನು ನಿಖರವಾಗಿ ಅಂದಾಜಿಸುವ ಮೀನುಗಾರರು 24 ಗಂಟೆಗಳ ಕಾಲ ನದಿ ದಂಡೆಯಲ್ಲಿ ಕಾವಲಿದ್ದು, ಶವ ಶೋಧಿಸಿ ಪೊಲೀಸರಿಗೆ ಅಥವಾ ಅವರ ಸಂಬಂಧಿಕರಿಗೆ ಹಸ್ತಾಂತರಿಸುತ್ತಾರೆ. ಈ ಮೂಲಕ ನೊಂದವರಿಗೆ ನೆರವಾಗುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು ಶವಶೋಧಕ ಮೀನುಗಾರರನ್ನು ಈಚೆಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿದರು
ಪ್ರಾಣದ ಹಂಗು ತೊರೆದು ಮುಳುಗುವವರನ್ನು ಬದುಕಿಸಲು ಪ್ರಯತ್ನಿಸುತ್ತೇವೆ. ಮುಳುಗುವವರು ಬದುಕಿ ಬಂದರೆ ಅದಕ್ಕಿಂತ ಸಂತೋಷ ಬೇರಾವುದರಿಂದಲೂ ದೊರೆಯುವುದಿಲ್ಲ
ಮಹೇಶ ಕಿಳ್ಳಿಕ್ಯಾತರ ಕೊರ್ಲಹಳ್ಳಿ
ಪ್ರತಿಫಲ ಶೂನ್ಯ...
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೇವಲ ಮಾನವೀಯತೆ ದೃಷ್ಟಿಯಿಂದ ಶವ ಶೋಧನೆಗಿಳಿಯುವ ಮೀನುಗಾರರ ತಂಡವು ಮೃತರ ಕುಟುಂಬಕ್ಕೆ ಆಪದ್ಭಾಂದರಾಗಿದ್ದಾರೆ. ಹೀಗೆ ನೀರಿನಲ್ಲಿಳಿದು ಶವ ಶೋಧ ಕೈಗೊಳ್ಳುವ ಮೀನುಗಾರರಿಗೆ ಯಾವ ನೆರವು ಕೂಡ ದೊರೆಯುವುದಿಲ್ಲ. ಖಷಿ ಕೇಳುವ ಸಂದರ್ಭವೂ ಅದಲ್ಲ. ಹೀಗಾಗಿ ಮೀನುಗಾರರು ತಮ್ಮ ದುಡಿಮೆ ಬಿಟ್ಟು ಶವ ಶೋಧ ಕಾರ್ಯಕೈಗೊಳ್ಳುವುದಕ್ಕೆ ಯಾವುದಾದರೂ ಮೂಲದಿಂದ ನೆರವು ದೊರೆಯಬೇಕು ಎನ್ನುವುದು ಗ್ರಾಮಸ್ಥರ ಅಪೇಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.