ADVERTISEMENT

ಕ್ರೀಡೆಯಲ್ಲಿ ಗದುಗಿನ ಛಾಪು ದೊಡ್ಡದು: ಶಾಸಕ ಎಚ್.ಕೆ.ಪಾಟೀಲ ಮೆಚ್ಚುಗೆ

ರಾಷ್ಟ್ರ ಮಟ್ಟದ 17ನೇ ಎಂಟಿಬಿ ಸೈಕ್ಲಿಂಗ್‌ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 5:12 IST
Last Updated 19 ಫೆಬ್ರುವರಿ 2021, 5:12 IST
ಕಳಸಾಪುರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 17ನೇ ರಾಷ್ಟ್ರೀಯ ಮೌಂಟೆನ್ ಟೆರೈನ್‌ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್ ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರು ನೆರವೇರಿಸಿದರು
ಕಳಸಾಪುರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 17ನೇ ರಾಷ್ಟ್ರೀಯ ಮೌಂಟೆನ್ ಟೆರೈನ್‌ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್ ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರು ನೆರವೇರಿಸಿದರು   

ಗದಗ: ‘ಗದಗ ಚಿಕ್ಕ ಜಿಲ್ಲೆಯಾದರೂ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅನೇಕ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ’ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಫೆ.19ರಿಂದ 21ರವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಮೌಂಟೆನ್ ಟೆರೈನ್‌ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕಳಸಾಪುರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆಯಿತು. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸೈಕ್ಲಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಲಮ್ಮ ಮಲ್ಲಿಗವಾಡ, ಕುಸ್ತಿಯಲ್ಲಿ ಪ್ರೇಮಾ ಹುಚ್ಚಣ್ಣವರ, ಅಥ್ಲೇಟಿಕ್ಸ್‌ನಲ್ಲಿ ಹರೀಶ ಮಟಗಾರ, ಕ್ರಿಕೆಟ್‌ನಲ್ಲಿ ಸುನೀಲ ಜೋಶಿ ಗದುಗಿನ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಆಯೋಜನೆಗೊಂಡಿರುವ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸ್ಪರ್ಧಾಳು
ಗಳಿಗೆ ಸೌಲಭ್ಯಗಳ ಕೊರತೆಯಾಗದಂತೆ ಸಂಘಟಕರು ಎಚ್ಚರ ವಹಿಸಬೇಕು. ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಬೇಕು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಯುವಜನತೆ ಸೈಕ್ಲಿಂಗ್‌ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇದು ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.

‘ಸೈಕ್ಲಿಸ್ಟ್‌ಗಳಿಗೆ ಸರ್ಕಾರಅನೇಕ ಸವಲತ್ತು ಒದಗಿಸುತ್ತಿದ್ದು, ಕ್ರೀಡಾಪಟುಗಳು ಸದುಪಯೋಗ ಪಡೆದುಕೊಂಡು ಅಂತರರಾಷ್ಟ್ರಿಯ ಮಟ್ಟದಲ್ಲಿಯೂ ಮಿಂಚಿ ದೇಶಕ್ಕೆ ಕೀರ್ತಿ ತರಬೇಕು. ಜಿಲ್ಲೆಯಲ್ಲಿ ಆಯೋಜನೆಗೊಂಡಿರುವ ಈ ಸ್ಪರ್ಧೆಯಿಂದ ನಾಡಿನ ಯುವಜನರಲ್ಲಿ ಸೈಕ್ಲಿಂಗ್‌ ಸ್ಫೂರ್ತಿ ಇಮ್ಮಡಿಯಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಪ್ಪ ಈಶ್ವರಪ್ಪ ನಾಡಗೌಡ್ರ, ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಅಸುಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಅಣ್ಣಿಗೇರಿ, ಉಪಾಧ್ಯಕ್ಷ ಭೀಮಪ್ಪ ಪೂಜಾರ, ಬಿಂಕದಕಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗವ್ವ ತಡಸಿ, ಉಪಾಧ್ಯಕ್ಷ ಅಶೋಕ ಕರೂರ, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್., ಎಸ್‌ಪಿ ಯತೀಶ್ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್, ಓಂಕಾರ ಸಿಂಗ್, ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಉಪಾಧ್ಯಕ್ಷರಾದ ಚನ್ನಪ್ಪ ಎಸ್.ಜಗಲಿ, ಜಿ.ವಿ.ಪಾಟೀಲ, ಕಾರ್ಯದರ್ಶಿ ಎಸ್.ಎಂ.ಕುರಣಿ, ಗದಗ ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾದ ರವಿಕುಮಾರ ಮರಲಿಂಗಣ್ಣವರ ವೇದಿಕೆಯಲ್ಲಿದ್ದರು.

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಕ್ರೀಡಾಪಟುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ, ಲಕ್ಷ್ಮೀದೇವಿ ಗವಾಯಿ, ಡಾ. ಚಂದನಾ ವಿ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.