ADVERTISEMENT

ಲಕ್ಷ್ಮೇಶ್ವರ: ಇದ್ದೂ ಇಲ್ಲದಂತಾದ ಗ್ರಾಮೀಣ ಆಸ್ಪತ್ರೆಗಳು

ತಾಲ್ಲೂಕಿನಲ್ಲಿರುವ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ

ನಾಗರಾಜ ಎಸ್‌.ಹಣಗಿ
Published 14 ಸೆಪ್ಟೆಂಬರ್ 2023, 5:43 IST
Last Updated 14 ಸೆಪ್ಟೆಂಬರ್ 2023, 5:43 IST
ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ
ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ   

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ನಾಲ್ಕು ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಮೂರರಲ್ಲಿ ಕಾಯಂ ವೈದ್ಯರೇ ಇಲ್ಲ. ಹೀಗಾಗಿ ನಿತ್ಯವೂ ಇಲ್ಲಿಯ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಬಾಲೆಹೊಸೂರು, ಸೂರಣಗಿ, ಶಿಗ್ಲಿ ಮತ್ತು ಯಳವತ್ತಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಎಲ್ಲ ಕೇಂದ್ರಗಳೂ ಸುಂದರವಾದ ಕಟ್ಟಡಗಳನ್ನು ಹೊಂದಿವೆ. ಆದರೆ ಅಲ್ಲಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ವೈದ್ಯರು ಇಲ್ಲ. ಕಾರಣ ಆಸ್ಪತ್ರೆಗಳು ಇದ್ದೂ ಇಲ್ಲದಂತಾಗಿವೆ.

ಸದ್ಯ ಬಾಲೆಹೊಸೂರು ಕೇಂದ್ರದಲ್ಲಿ ಒಬ್ಬರು ಟ್ರೈನಿ ವೈದ್ಯರು ಇದ್ದಾರೆ. ಸೂರಣಗಿ ಮತ್ತು ಶಿಗ್ಲಿ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಒಬ್ಬ ವೈದ್ಯರು ತಲಾ ಮೂರು ದಿನಗಳಂತೆ ಕರ್ತವ್ಯ ನಿರ್ವಹಿಸುತ್ತಾರೆ. ಅವರು ರಜೆ ಇದ್ದರೆ ಯಾರೂ ಇಲ್ಲ. ಯಳವತ್ತಿಯಲ್ಲಿ ಮಾತ್ರ ಒಬ್ಬ ಕಾಯಂ ವೈದ್ಯರು ಇದ್ದಾರೆ.

ADVERTISEMENT

ಮೂರು ಕೇಂದ್ರಗಳಲ್ಲಿ ಕಾಯಂ ವೈದ್ಯರು ಇಲ್ಲದೇ ಇರುವುದರಿಂದ ಆ ಭಾಗದ ಜನರು ಚಿಕಿತ್ಸೆಗಾಗಿ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ದಿನವೂ ಲಕ್ಷ್ಮೇಶ್ವರದಲ್ಲಿ ಹೊರ ರೋಗಿಗಳ ಸಂಖ್ಯೆ 400 ಮೀರುತ್ತಿದೆ. ಆದರೆ ಇಲ್ಲೂ ಅಗತ್ಯ ಇರುವಷ್ಟು ವೈದ್ಯರು ಇಲ್ಲ. ಇದರಿಂದಾಗಿ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಸಿಗುವುದು ಅಷ್ಟಕ್ಕಷ್ಟೇ ಎಂಬಂತಾಗಿದೆ.

ಶಿಗ್ಲಿ ಮತ್ತು ಸೂರಣಗಿ ಆಸ್ಪತ್ರೆಗಳಲ್ಲಿ ವೈದ್ಯರು ಇದ್ದಾಗ ಆಯಾ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಆದರೆ ಕೇವಲ ವಾರದಲ್ಲಿ ಮೂರು ದಿನ ವೈದ್ಯರು ಲಭ್ಯ ಇರುವುದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ.

ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಇರಬೇಕು. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ತಾಲ್ಲೂಕಿನ ಆಸ್ಪತ್ರೆಗಳಿಗೆ ಅಗತ್ಯ ಇರುವಷ್ಟು ವೈದ್ಯರನ್ನು ನೇಮಕ ಮಾಡಬೇಕು ಎಂದು ಅನೇಕ ಸಂಘಟನೆಗಳು ಹೋರಾಟ ಮಾಡುತ್ತಲೇ ಇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಕ್ತ ವೈದ್ಯರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಣ್ಣ ಬೆಟಗೇರಿ ಎಚ್ಚರಿಸಿದ್ದಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಇಬ್ಬರೇ ವೈದ್ಯರು
ಲಕ್ಷ್ಮೇಶ್ವರ ಆಸ್ಪತ್ರೆಗೆ ಐದು ವೈದ್ಯರ ಅಗತ್ಯವಿದೆ. ಆದರೆ ಸದ್ಯ ಇಬ್ಬರು ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಡೆಂಟಿಸ್ಟ್‌ ಮತ್ತೊಬ್ಬರು ಎಂಬಿಬಿಎಸ್ ವೈದ್ಯರಿದ್ದಾರೆ. ಚಿಕ್ಕ ಮಕ್ಕಳ ತಜ್ಞರು ಪ್ರಸೂತಿ ವೈದ್ಯರು ಒಬ್ಬರು ಅರಿವಳಿಕೆ ವೈದ್ಯರ ಅಗತ್ಯ ಇದೆ. ಗ್ರಾಮೀಣ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಸುಭಾಷ ದಾಯಗೊಂಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.