ಗದಗ: ‘ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್‌ನವರು ಸಾಲ ಒದಗಿಸಲು ಸೂಕ್ತಕ್ರಮ ವಹಿಸಿ, ಮಾರ್ಗದರ್ಶನ ನೀಡಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಸಾಲ ನೀಡಿದರೆ ಜಿಲ್ಲೆಯಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾಗಿ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ (ಡಿಸಿಸಿ ಮತ್ತು ಡಿಎಲ್‌ಆರ್‌ಸಿ) ಸಲಹಾ ಸಮಿತಿ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಬ್ಯಾಂಕ್‌ನವರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಜಿಲ್ಲೆ ಶೀಘ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೆ, ಉದ್ದಿಮೆಗಳಿಗೆ ಬ್ಯಾಂಕ್‌ನವರು ಸಾಲ ನೀಡುವ ಪ್ರಕ್ರಿಯೆಯಲ್ಲಿ ಸಮಸ್ಯೆಗಳೇನಾದರೂ ಎದುರಾದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳೊಂದಿಗೆ ಸೂಕ್ತ ರೀತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು’ ಎಂದರು.
‘ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್‌ಗಳ ಮುಖಾಂತರ ನಿಗದಿತ ಕಾಲಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಬಡಜನರು ಹಾಗೂ ರೈತರಿಗೆ ಬ್ಯಾಂಕ್‌ನವರ ಸರಿಯಾದ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿದೆ’ ಎಂದು ಹೇಳಿದರು.
ಗದಗ ಜಿಲ್ಲೆ ಕೃಷಿ ಪ್ರಧಾನವಾಗಿದ್ದು ರೈತರಿಗೆ ಸಾಲ ನೀಡುವಾಗ ವಿನಾಕಾರಣ ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹವಿದೆ. ಕೃಷಿ ಕ್ಷೇತ್ರಕ್ಕೆ ಸಾಲ ನೀಡಿಕೆಗೆ ಹೆಚ್ಚು ಒತ್ತು ನೀಡಬೇಕು. ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಯವರೊಂದಿಗೆ ಯೋಜನೆಯ ಅನುಷ್ಟಾನಕ್ಕೆ ಪೂರಕವಾಗುವಂತೆ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
‘ಬ್ಯಾಂಕ್‌ನಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಂದಾಗ ವಿನಾಕಾರಣ ಅರ್ಜಿಯನ್ನು ತಿರಸ್ಕರಿಸದೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅರ್ಜಿ ಸ್ವೀಕರಿಸಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಬ್ಯಾಂಕ್ ಅಧಿಕಾರಿಗಳು ಶ್ರಮಿಸಬೇಕು’ ಎಂದರು.
ಸಭೆಯಲ್ಲಿ ಉದ್ಯೊಗಿನಿ, ಪಿಎಂಇಜಿಪಿ, ಪಿಎಂ ಸ್ವನಿಧಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡಸಲಾಯಿತು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ, ಜಿಲ್ಲಾ ಸಾಲ ಯೋಜನೆ ಕೈಪಿಡಿ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಎಸ್.ಬಿ.ಐ ಆರ್.ಬಿ.ಓ ಪ್ರಾದೇಶಿಕ ವ್ಯವಸ್ಥಾಪಕ ನಾಗಸುಬ್ಬಾರೆಡ್ಡಿ ಬಿ., ಆರ್.ಬಿ.ಐ ಎಜಿಎಂ ಸೂರಜ್ ಎಸ್., ನಬಾರ್ಡ್ ಎ.ಜಿ.ಎಂ. ಮಯೂರ ಕಾಂಬಳೆ, ಜಿಲ್ಲಾ ಪಂಚಾಯಿತಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ್ರ ಕೊಟ್ಟೂರ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಸೇರಿದಂತೆ ಅಧಿಕಾರಿಗಳು ಇದ್ದರು.
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖಾಂತರ ಹಣ ಜಮೆಯಾಗುತ್ತಿದ್ದರೆ ಅಂತಹ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕ್‌ನಿಂದ ಸಾಲ ನೀಡಿಕೆಯ ಹಣದೊಂದಿಗೆ ಹೊಂದಾಣಿಕೆ ಮಾಡಬಾರದುಬಸವರಾಜ ಬೊಮ್ಮಾಯಿ ಸಂಸದ
ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ನವರಿಗೆ ಸಾಲ ನೀಡಿಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದರೆ ಜಿಲ್ಲಾಡಳಿತ ಮತ್ತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕುಭರತ್ ಎಸ್. ಜಿಲ್ಲಾ ಪಂಚಾಯಿತಿ ಸಿಇಒ
ಶೇ 98.16ರಷ್ಟು ಸಾಲ ಠೇವಣಿ ಅನುಪಾತ:
‘ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್‌ನ 182 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ಜೂನ್ 2025ರ ಅಂತ್ಯಕ್ಕೆ ಸಾಲ ಠೇವಣಿ ಅನುಪಾತ ಶೇ 98.16ರಷ್ಟಿದೆ. ಎಲ್ಲ ಬ್ಯಾಂಕ್‌ನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ. ತಿಳಿಸಿದರು. ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ ಜೂನ್ ಅಂತ್ಯದವರೆಗೆ ಕೃಷಿ ವಲಯಕ್ಕೆ ₹85461.97 ಲಕ್ಷ ಸಾಲ ನೀಡಿಕೆಯಾಗಿದೆ. ಕೃಷಿ ಎಂಎಸ್‌ಎಂಇ ಶಿಕ್ಷಣ ಹೌಸಿಂಗ್ ಇತರೆ ಸೇರಿದಂತೆ ಆದ್ಯತಾ ವಲಯಕ್ಕೆ ₹128065.08 ಲಕ್ಷ ಸಾಲ ನೀಡಿಕೆಯಾಗಿದೆ ಎಂದರು. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಶಿಶು ಯೋಜನೆಯಲ್ಲಿ 38696 ಅರ್ಜಿಗಳು ಸ್ವೀಕರಿಸಿ ₹8142 ಲಕ್ಷ ಕಿಶೋರ ಯೋಜನೆಯಡಿ 33748 ಅರ್ಜಿಗಳು ಸ್ವೀಕರಿಸಿ ₹31742.94 ಲಕ್ಷ ಹಾಗೂ ತರುಣ ಯೋಜನೆಯಡಿ 1796 ಅರ್ಜಿಗಳನ್ನು ಸ್ವೀಕರಿಸಿ ₹10935.22 ಲಕ್ಷ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.