ADVERTISEMENT

ಎಸ್‌ಐಆರ್‌ – 'ವಿಶೇಷ' ಪದದಲ್ಲೇ ಹುನ್ನಾರವಿದೆ...: ಚಿಂತಕ ಶಿವಸುಂದರ

ಸಂವಾದ ಗೋಷ್ಠಿಯಲ್ಲಿ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 1:19 IST
Last Updated 7 ಫೆಬ್ರುವರಿ 2026, 1:19 IST
ಶಿವಸುಂದರ್‌
ಶಿವಸುಂದರ್‌   

ಗದಗ: ‘ದೇಶದ 31 ರಾಜ್ಯಗಳಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪೂರ್ಣಗೊಳ್ಳುವ ವೇಳೆಗೆ,  20 ಕೋಟಿ ಜನರು ಪಟ್ಟಿಯಿಂದ ಹೊರಗುಳಿಯುತ್ತಾರೆ’ ಎಂದು ಚಿಂತಕ ಶಿವಸುಂದರ ಆತಂಕ ವ್ಯಕ್ತಪಡಿಸಿದರು. 

ಮೇ ಸಾಹಿತ್ಯ ಮೇಳ, ಲಡಾಯಿ ಪ್ರಕಾಶನ ಹಾಗೂ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ನಡೆದ ‘ಎಸ್‌ಐಆರ್‌: ಪೌರತ್ವದ ಪ್ರಶ್ನೆ– ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಐಆರ್‌ನಲ್ಲಿರುವ ವಿಶೇಷ ಎಂಬ ಪದದಲ್ಲೇ ಅತಿದೊಡ್ಡ ಹುನ್ನಾರವಿದೆ. ಇದು ಕೇವಲ ಮತಪಟ್ಟಿಯ ವಿಶೇಷ ಪರಿಷ್ಕರಣೆ ಅಲ್ಲ. ಈ ದೇಶದ ನಾಗರಿಕರ ನಾಗರಿಕತ್ವದ ಪರಿಷ್ಕರಣೆ’ ಎಂದರು.

‘ಎಸ್‌ಐಆರ್‌ ಮೂಲಕ ಪ್ರಧಾನಿ ಮೋದಿ ಅವರು ದೇಶದ 140 ಕೋಟಿ ಜನರ ಮೇಲೆ ಆರೋಪ ಪಟ್ಟಿ ಹಾಕಿದ್ದಾರೆ. ಅಂದರೆ, ಈಗ ಇರುವವರೆಲ್ಲರೂ ಈ ದೇಶದ ನಾಗರಿಕರಲ್ಲ. ಅವರು ಕೇಳುವ ದಾಖಲೆಗಳನ್ನು ಒದಗಿಸಿ, ಭಾರತೀಯರು ಎಂದು ಸಾಬೀತು ಪಡಿಸಬೇಕೆಂದು ಅಗ್ನಿಪರೀಕ್ಷೆ ಇಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

‘12 ರಾಜ್ಯಗಳಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಎಸ್‌ಐಆರ್‌ ಪೂರ್ವ ಹಂತದಲ್ಲಿ ಮ್ಯಾಚಿಂಗ್‌ ಮತ್ತು ಮ್ಯಾಪಿಂಗ್‌ ನಡೆದಿದೆ. ಇಲ್ಲಿ ದಾಖಲೆಗಳು ಹೊಂದಾಣಿಕೆಯಾದರೆ ಸಮಸ್ಯೆ ಇಲ್ಲ. ಇಲ್ಲವಾದರೆ ದಾಖಲೆಗಳು ಒದಗಿಸಿಲ್ಲ ಎಂಬ ಕಾರಣಕ್ಕೆ ಈ ಹಂತದಲ್ಲಿ ಈಗಾಗಲೇ ಕೋಟ್ಯಂತರ ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅವರಲ್ಲಿ ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು ಹೆಚ್ಚಿದ್ದಾರೆ’ ಎಂದರು.

‘ದೇಶದ ನಾಗರಿಕ ಅಲ್ಲ ಎಂದು ಘೋಷಣೆಯಾದರೆ ವ್ಯಕ್ತಿ ಬದುಕನ್ನೇ ಕಳೆದುಕೊಳ್ಳುತ್ತಾನೆ. ಮಕ್ಕಳನ್ನು ಶಾಲೆಗೆ ಸೇರಿಸಲಾಗದು. ಸ್ವಂತ ಉದ್ಯೋಗ, ಕಷ್ಟಕಾಲದಲ್ಲಿ ಪೊಲೀಸರಿಗೆ ದೂರು ಕೊಡುವ ಅವಕಾಶವನ್ನೂ ಕಳೆದುಕೊಳ್ಳುತ್ತಾನೆ’ ಎಂದರು.

‘ದೇಶದ ಸಂವಿಧಾನವನ್ನು ಆರ್‌ಎಸ್‌ಎಸ್‌ ವಿರೋಧಿಸುತ್ತದೆ. ಅವರಿಗೆ ಹಿಂದೂ ರಾಜ್ಯ ಕಟ್ಟಲು ಸಂವಿಧಾನವೇ ಅಡ್ಡಿಯಾಗಿದೆ. ಅದಕ್ಕಾಗಿ ಎಸ್‌ಐಆರ್‌ ಅಸ್ತ್ರ ಹಿಡಿದಿದ್ದಾರೆ. 50 ವರ್ಷ ಆಡಳಿತ ಮಾಡಬೇಕು, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬುದು ಉದ್ದೇಶವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.