ADVERTISEMENT

ಡಂಬಳದ ರೊಟ್ಟಿ ಜಾತ್ರೆ ಇಂದಿನಿಂದ

ಲಕ್ಷ್ಮಣ ಎಚ್.ದೊಡ್ಡಮನಿ
Published 10 ಫೆಬ್ರುವರಿ 2020, 19:30 IST
Last Updated 10 ಫೆಬ್ರುವರಿ 2020, 19:30 IST
ಡಂಬಳದ ತೋಂಟದಾರ್ಯ ಜಾತ್ರೆಗಾಗಿ ಭಕ್ತರು ತಯಾರಿಸಿದ 1ಲಕ್ಷ ಜೋಳದ ರೊಟ್ಟಿಯ ಸಂಗ್ರಹಿಸಿರುವುದು
ಡಂಬಳದ ತೋಂಟದಾರ್ಯ ಜಾತ್ರೆಗಾಗಿ ಭಕ್ತರು ತಯಾರಿಸಿದ 1ಲಕ್ಷ ಜೋಳದ ರೊಟ್ಟಿಯ ಸಂಗ್ರಹಿಸಿರುವುದು   

ಡಂಬಳ: ಇಲ್ಲಿನ ತೊಂಟದಾರ್ಯ ಮಠದ 280ನೇ ಜಾತ್ರಾ ಮಹೋತ್ಸವವು ಫೆ.10 ಹಾಗೂ 11ರಂದು ನಡೆಯಲಿದೆ.

ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಈ ಜಾತ್ರೆಯನ್ನು ಕೋಮು ಸಾಮರಸ್ಯ ಬೆಳೆಸುವ ವಿಶಿಷ್ಟ ಉತ್ಸವವನ್ನಾಗಿ ರೂಪಿಸಿದರು. ಶ್ರೀಮಠದ 20ನೇ ಪೀಠಾಧಿಪತಿ ಡಾ. ಸಿದ್ಧರಾಮ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಾತ್ರೆ ನಡೆಯಲಿದೆ.

ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಪಣ ತೊಟ್ಟಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 1976ರಲ್ಲಿ ಭಾವೈಕ್ಯತೆಗಾಗಿ ಮೊಟ್ಟ ಮೊದಲು ರೊಟ್ಟಿ ಜಾತ್ರೆಯನ್ನು ಡಂಬಳ ಜಾತ್ರೆಯಲ್ಲಿ ಪ್ರಾರಂಭಿಸಿದರು. ಮಠದ ಆವರಣದಲ್ಲಿ ಎಲ್ಲರೂ ಸಾಮೂಹಿಕವಾಗಿ ಪಂಕ್ತಿ ಭೇದವಿಲ್ಲದ ಪ್ರಸಾದ ಸ್ವೀಕರಿಸುತ್ತಿರುವುದು ಇತಿಹಾಸದ ಪುಟದಲ್ಲಿ ಸೇರಿದೆ.

ADVERTISEMENT

ಎಲ್ಲ ಜಾತಿ, ಧರ್ಮದ ಜನರು ಒಟ್ಟಿಗೆ ಕುಳಿತು ಅನ್ಯೋನ್ಯತೆಯಿಂದ ಖಡಕ್‌ ರೊಟ್ಟಿ ಊಟ ಮಾಡುವುದೇ ಈ ಜಾತ್ರೆಯ ವಿಶೇಷ. ಫೆ. 10ರಂದು ಸಣ್ಣ ತೇರನ್ನು ಎಳೆಯುವುದರ ಜೊತೆಗೆ ರೊಟ್ಟಿ ಜಾತ್ರೆ ಕಳೆಗಟ್ಟುತ್ತದೆ. ಫೆ. 11ರಂದು ಲಘು ರಥೋತ್ಸವ. ಖಡಕ್ ರೊಟ್ಟಿ, ಕರಿಂಡಿ, ಬರ್ತ, ಅಗಸಿ ಚಟ್ನಿ, ಮೊಸರು, ಬಾನ, ಗೋಧಿ ಹುಗ್ಗಿ ಇತ್ಯಾದಿ ದೇಸಿ ಭಕ್ಷ್ಯಗಳು ಜಾತ್ರೆ ಊಟದ ವಿಶೇಷಗಳು.

ತೋಂಟದಾರ್ಯ ರಥೋತ್ಸವಕ್ಕೆ ಕೂಡ ಹಲವು ವೈಶಿಷ್ಟ್ಯಗಳಿವೆ. ತೇರಿನ ಮುಂದೆ ತೋಂಟದ ಶ್ರೀಗಳು ನಡೆಯುತ್ತಾ ಸಾಗಿದರೆ, ಅವರ ಜತೆಯಲ್ಲೇ ವಚನಗಳ ತಾಳೆಗರಿಗಳ ಸಂಪುಟಗಳ ಮೆರವಣಿಗೆ ನಡೆಯುತ್ತದೆ.

ಜಾತ್ರೆಗೆ ಬೇಕಾಗುವ ಸಾವಿರಾರು ರೊಟ್ಟಿಗಳನ್ನು ಮಾಡಿಕೊಂಡು ಗ್ರಾಮಸ್ಥರು, ಭಕ್ತರು ಹಾಗೂ ಅಭಿಮಾನಿಗಳು ಮಠಕ್ಕೆ ತಂದು ಕೊಡುತ್ತಾರೆ. ಅಕ್ಕ-ಪಕ್ಕದ ತಾಂಡಾಗಳ ಜನರು ಚಕ್ಕಡಿಗಳಲ್ಲಿ ರೊಟ್ಟಿಯನ್ನು ತುಂಬಿಕೊಂಡು ಬರುತ್ತಾರೆ. ಒಂದು ತಿಂಗಳ ಹಿಂದಿನಿಂದಲೇ ರೊಟ್ಟಿ ತಯಾರಿಸುವ ಕಾರ್ಯ ನಡೆಯುತ್ತದೆ.

ಜಾತ್ರೆ ನಡೆಯುವ ಎರಡು ದಿನಗಳ ಕಾಲ ಡೊಳ್ಳು, ಜನಪದ ಗೀತೆ, ಲಂಬಾಣಿ ಹಾಡು, ವಿವಿಧ ಕಲಾತಂಡದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗುತ್ತವೆ. ಅಲ್ಲದೆ ಜಾತ್ರೆಯ ಧರ್ಮಸಭೆಯಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡುವ ಮೂಲಕ ಜಾತ್ರೆಯ ಉದ್ದೇಶ ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

‘ಈಗಾಗಲೇ 40 ಕ್ವಿಂಟಾಲ್‌ ಬಿಳಿ ಜೋಳದಿಂದ ಅಂದಾಜು 1ಲಕ್ಷ ಖಡಕ್ ರೊಟ್ಟಿಗಳು ತಯಾರಾಗಿವೆ. ಮಾನವ ಕುಲವೆಲ್ಲ ಒಂದೇ ಎನ್ನುವ ಎನ್ನುವ ಸಂದೇಶವನ್ನು ಮಠವು ಸಾರುತ್ತಿದೆ’ ಎನ್ನುತ್ತಾರೆ ಮಠದ ವ್ಯವಸ್ಥಾಪಕ ಸಿ.ಆರ್ ಹಿರೇಮಠ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದಪ್ಪ ಬಿಸನಳ್ಳಿ, ಉಪಾಧ್ಯಕ್ಷ ಬಸವರಾಜ ಗಂಗಾವತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.