ADVERTISEMENT

ನರಗುಂದ: ಪದವೀಧರರ ಸಮಸ್ಯೆ ಪರಿಹಾರಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 4:42 IST
Last Updated 21 ಅಕ್ಟೋಬರ್ 2020, 4:42 IST
ನರಗುಂದದಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಕುಬೇರಪ್ಪ ಮತ ಯಾಚಿಸಿದರು
ನರಗುಂದದಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಕುಬೇರಪ್ಪ ಮತ ಯಾಚಿಸಿದರು   

ನರಗುಂದ: ರಾಜ್ಯ ಸರ್ಕಾರ ಪದವೀಧರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ, ಇದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಆದ್ದರಿಂದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಮನವಿ ಮಾಡಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆಯ್ಕೆ ಮಾಡಬೇಕು. ಕಳೆದ 40 ವರ್ಷಗಳಿಂದ ಶಿಕ್ಷಕರ, ಪದವೀಧರರ ಅನೇಕ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರಂತರ ಹೋರಾಟ ನಡೆಸಿ ನ್ಯಾಯ ಕೊಡಿಸಿದ್ದೇವೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರವಿದ್ದಾಗ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರನ್ನು ತುಂಬಿಕೊಂಡಿದ್ದು ನಮ್ಮ ಹೋರಾಟದ ಫಲವಾಗಿದೆ. ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಪದವೀಧರರಿಗೆ ₹8 ಸಾವಿರ ಸ್ಟೈಫಂಡ್ ಕೊಡಿಸಲು ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ADVERTISEMENT

ಮಾಜಿ ಶಾಸಕ ಬಿ.ಆರ್.ಯಾವಗಲ್ ಮಾತನಾಡಿ, ಆರ್.ಎಂ.ಕುಬೇರಪ್ಪನವರು ಈ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಪದವೀಧರರ ಧ್ವನಿಯಾಗಿಸಬೇಕು. ಕಾಂಗ್ರೆಸ್ ಪಕ್ಷವನ್ನು ಪದವೀಧರರು ಬಲಪಡಿಸಬೇಕು’ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಠಲ ತಿಮ್ಮರಡ್ಡಿ, ಅಪ್ಪಣ್ಣ ನಾಯ್ಕರ, ತಾಲ್ಲೂಕು ಕಾಂಗ್ರೆಸ್ ಸಮೀತಿ ಅಧ್ಯಕ್ಷ ಪ್ರವೀಣ ಯಾವಗಲ್, ಹನಮಂತಗೌಡ ಕಲ್ಮನಿ, ಕಾಂಗ್ರೆಸ ಪಕ್ಷದ ಮಾಧ್ಯಮ ವಕ್ತಾರ ರಾಜು ಕಲಾಲ, ಎಂ.ಬಿ.ಅರಹುಣಿಸಿ, ಸುರೇಶ ಪಲ್ಟನಕರ ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.