ADVERTISEMENT

ಕ್ಷಯಮುಕ್ತ ಭಾರತಕ್ಕಾಗಿ ಜಾಗೃತಿ ಅವಶ್ಯಕ

ಕ್ಷಯಮುಕ್ತ ಭಾರತ ಅಭಿಯಾನ: ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅರುಂಧತಿ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:31 IST
Last Updated 11 ಮೇ 2025, 16:31 IST
ಗದಗ ನಗರದ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಜಾಥಾಕ್ಕೆ ಡಾ. ಅರುಂಧತಿ ಕುಲಕರ್ಣಿ ಚಾಲನೆ ನೀಡಿದರು
ಗದಗ ನಗರದ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಜಾಥಾಕ್ಕೆ ಡಾ. ಅರುಂಧತಿ ಕುಲಕರ್ಣಿ ಚಾಲನೆ ನೀಡಿದರು   

ಗದಗ: ‘ಕ್ಷಯ ರೋಗವನ್ನು ನಿಯಂತ್ರಿಸಲು ಮತ್ತು ಅದರ ನಿರ್ಮೂನೆ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕ’ ಎಂದು ಗದಗ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಹೇಳಿದರು.

ನಗರದ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ ಮತ್ತು ಎನ್‌ಎಸ್‌ಎಸ್‌ ಘಟಕದ ವತಿಯಿಂದ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.

‘2030ರೊಳಗೆ ಕ್ಷಯಮುಕ್ತ ಭಾರತ ನಿರ್ಮಾಣ ಮಾಡಲು ನಾವು ಸಾರ್ವಜನಿಕರಲ್ಲಿ ಅದರ ಬಗ್ಗೆ ಅರಿವು ಮತ್ತು ತಡೆಗಟ್ಟುವ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯವರು ಜಾಗೃತಿ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.

ADVERTISEMENT

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಎನ್. ಬೆಳವಡಿ ಮಾತನಾಡಿ, ‘ನಮ್ಮ ಮಹಾವಿದ್ಯಾಲಯವು ಪ್ರತಿವರ್ಷದಂತೆ ಈ ವರ್ಷವು ಹಲವಾರು ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಅದರಂತೆ ಕ್ಷಯರೋಗದ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ನಿಕ್ಷಯ– ಕ್ಷಯ ತಪಾಸಣಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕ್ಷಯರೋಗದ ಕುರಿತು ಹಲವಾರು ಉಪನ್ಯಾಸ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮಗಳನ್ನು ನಡೆಸಿದೆ’ ಎಂದರು.

ಮಹಾವಿದ್ಯಾಲಯ ದತ್ತು ತೆಗೆದುಕೊಂಡಿರುವ ಗ್ರಾಮಗಳಲ್ಲಿಯೂ ಕ್ಷಯ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಮತ್ತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಾವಿದ್ಯಾಲಯದ ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಬೂದೇಶ ಎಂ. ಕನಾಜ ಪ್ರಾಸ್ತಾವಿಕ ಮಾತನಾಡಿದರು.

ಜಾಗೃತಿ ಜಾಥಾ ಮಹಾವಿದ್ಯಾಲಯದಿಂದ ಪ್ರಾರಂಭವಾಗಿ ಗದಗ ನಗರದ ಬನ್ನಿಕಟ್ಟಿ, ಬಸವೇಶ್ವರ ಸರ್ಕಲ್, ಟಾಂಗಾಕೂಟ, ಮಹೇಂದ್ರಕರ ಸರ್ಕಲ್ ಮತ್ತು ಗಾಂಧಿ ಸರ್ಕಲ್ ಮೂಲಕ ಸಂಚರಿಸಿ, ಮಹಾವಿದ್ಯಾಲಯಕ್ಕೆ ಮರಳಿತು.

ಈ ಸಮಯದಲ್ಲಿ ‘ಕ್ಷಯವನ್ನು ಸೋಲಿಸಿ; ದೇಶವನ್ನು ಗೆಲ್ಲಿಸಿ’, ‘ಔಷಧಿ ಸೇವಿಸಿ ಕ್ಷಯ ಓಡಿಸಿ’, ‘ಕಫ ಪರೀಕ್ಷಿಸಿ ಕ್ಷಯ ಅಳಿಸಿರಿ’, ‘ಪ್ರಾಣಾಯಮ ಮಾಡಿರಿ ಕ್ಷಯದಿಂದ ರಕ್ಷಿಣೆ ಪಡೆಯಿರಿ’, ‘ನಮ್ಮ ಹೆಜ್ಜೆ ಕ್ಷಯರೋಗ ಮುಕ್ತ ಭಾರತದೆಡೆ’ ಇತ್ಯಾದಿ ಘೋಷವಾಕ್ಯಗಳನ್ನು ವಿದ್ಯಾರ್ಥಿಗಳು ಕೂಗಿದರು.

ಜಾಥಾ ಜಾಗೃತಿ ಅಭಿಯಾನದ ಸಂಯೋಜಕ ಬಿ.ಎಂ.ಅವರಡ್ಡಿ, ಡಾ. ಎಂ.ವಿ.ಸೊಬಗಿನ, ಡಾ. ಎಂ.ಡಿ.ಸಮುದ್ರಿ, ಡಾ. ಆರ್.ಪಿ.ದೇವಧರ, ಡಾ. ಕುಮಾರ ಸಿ. ಹಾಗೂ ಡಾ. ಕೆ.ಎಂ.ನದಾಫ ಹಾಗೂ ಇತರ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ,  ವಿದ್ಯಾರ್ಥಿಗಳು ಹಾಗೂ ಗದಗ ನಗರದ ಸಂಚಾರ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.