ADVERTISEMENT

ಗದಗ: ಬಿಂಕದಕಟ್ಟಿ ಮೃಗಾಲಯಕ್ಕೆ ಧರ್ಮ, ಅರ್ಜುನ ಆಗಮನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 12:21 IST
Last Updated 19 ಮಾರ್ಚ್ 2021, 12:21 IST
ಬಿಂಕದಕಟ್ಟಿ ಮೃಗಾಲಯದಲ್ಲಿರುವ ಎರಡು ಸಿಂಹಗಳು
ಬಿಂಕದಕಟ್ಟಿ ಮೃಗಾಲಯದಲ್ಲಿರುವ ಎರಡು ಸಿಂಹಗಳು   

ಗದಗ: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಶುಕ್ರವಾರ ಇಲ್ಲಿನ ಬಿಂಕದಕಟ್ಟಿ ಮೃಗಾಲಯಕ್ಕೆ ಎರಡು ಸಿಂಹಗಳನ್ನು ಕರೆತರಲಾಗಿದ್ದು, 11 ವರ್ಷದ ಧರ್ಮ ಮತ್ತು ಅರ್ಜುನ ಎಂಬ ಹೆಸರಿನ ಎರಡು ಸಿಂಹಗಳು ಈಗ ಕಿರು ಮೃಗಾಲಯದ ಆಕರ್ಷಣೆ ಹೆಚ್ಚಿಸಿವೆ.

ಈ ಸಿಂಹಗಳು ಮಧ್ಯ ಕರ್ನಾಟಕಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತಹ ವಾತಾವರಣವನ್ನು ಮೃಗಾಲಯದಲ್ಲಿ ನಿರ್ಮಿಸಲಾಗಿದೆ. ಸಿಂಹಕ್ಕೆ ಮುಖ್ಯವಾಗಿ ಬಂಡೆಗಳು, ಬಿಸಿಲು ಬೇಕು. ಅದರಂತೆ ವಾತಾವರಣ ವಿನ್ಯಾಸ ಮಾಡಲಾಗಿದೆ. ಸ್ನಾನಕ್ಕೆ ಕೃತಕ ಕೊಳ ನಿರ್ಮಿಸಲಾಗಿದೆ.

‘ಎರಡು ಸಿಂಹಗಳನ್ನು 15 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗುವುದು. ಈ ಸಂದರ್ಭದಲ್ಲಿ ಅವುಗಳ ನಡವಳಿಕೆ, ಆಹಾರ ಪದ್ಧತಿ ಬಗ್ಗೆ ಗಮನಹರಿಸಲಾಗುವುದು. ಇಲ್ಲಿನ ಸಿಂಹಗಳಿಗೆ ಪ್ರತಿದಿನ 10 ಕೆ.ಜಿ. ದನದ ಮಾಂಸವನ್ನು ಆಹಾರವಾಗಿ ನೀಡಲಾಗುವುದು. ವಾರದಲ್ಲಿ ಆರು ದಿನ ಮಾಂಸ ನೀಡಿ, ಒಂದು ದಿನ ಉಪವಾಸ ಮಾಡಿಸಲಾಗುವುದು. ಪ್ರತಿದಿನ ಮಾಂಸ ನೀಡುವುದರಿಂದ ಸಿಂಹಗಳಿಗೆ ಹೆಚ್ಚಿನ ಚಟುವಟಿಕೆ ಬೇಕಾಗುತ್ತದೆ. 10 ಕೆ.ಜಿ. ಮಾಂಸ ತಿಂದಾಗ ಕನಿಷ್ಠ 5ರಿಂದ 6 ಕಿ.ಮೀ. ಅವು ಓಡಾಡಬೇಕು. ಮೃಗಾಯದಲ್ಲಿ ಸಿಂಹಗಳ ದೇಹಕ್ಕೆ ಅಷ್ಟು ವ್ಯಾಯಾಮ ಸಿಗದ ಕಾರಣ ಒಂದು ದಿನ ಉಪವಾಸ ಮಾಡಿಸಲಾಗುವುದು’ ಎಂದು ಮೃಗಾಲಯದ ಪಶು ವೈದ್ಯಕೀಯ ಸಹಾಯಕ ನಿಖಿಲ್‌ ಕುಲಕರ್ಣಿ ತಿಳಿಸಿದರು.

ADVERTISEMENT

‘39 ಎಂ.ಎಂ.ನ ಮೂರು ಪದರದ ಗ್ಲಾಸ್‌ಗಳನ್ನು ಅಳವಡಿಸಲಾಗುವುದು. ಈ ಗಾಜು ಪಾಂಡಿಚೇರಿಯಿಂದ ಬರಲಿದ್ದು, ಸಿಂಹಗಳು ಕ್ವಾರಂಟೈನ್‌ ಅವಧಿ ಮುಗಿಸುವ ವೇಳೆಗೆ ಕೆಲಸ ಪೂರ್ಣಗೊಳ್ಳಲಿದೆ. ಮೃಗಾಲಯಕ್ಕೆ ಬರುವ ಪ್ರೇಕ್ಷಕರು ಗಾಜಿನ ಮೂಲಕವೇ ವೀಕ್ಷಣೆ ಮಾಡಬಹುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.