ADVERTISEMENT

ಟೀಕೆಗಾಗಿ ಟೀಕೆ ಸಲ್ಲದು: ಉದಾಸಿ

ನೂತನ ಪದಾಧಿಕಾರಿಗಳ ಪದಗ್ರಹಣ, ಪತ್ರಿಕಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 4:15 IST
Last Updated 4 ಜುಲೈ 2022, 4:15 IST
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ ಸನ್ಮಾನಿಸಿದರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ ಸನ್ಮಾನಿಸಿದರು   

ಗದಗ: ‘ರಾಜಕಾರಣಿಯಾಗಿ ಕ್ರಿಯಾತ್ಮಕ ಟೀಕೆಗಳನ್ನು ಸ್ವೀಕರಿಸಲು ಸದಾ ಸಿದ್ಧನಿರುವೆ. ಆದರೆ, ಟೀಕೆ ಮಾಡಬೇಕು ಅಂತ ಹೇಳಿ ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡದಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ವಿರೋಧ ಪಕ್ಷಗಳ ನಾಯಕರಿಗೂ ಪತ್ರಕರ್ತರಿಗೂ ವ್ಯತ್ಯಾಸ ಇರುವುದಿಲ್ಲ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ 2022-25ನೇ ಸಾಲಿನ ಜಿಲ್ಲಾ ಹಾಗೂ ತಾಲ್ಲೂಕ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘2000ನೇ ಇಸವಿವರೆಗೂ ಒಂದು ಬಗೆಯಲ್ಲಿದ್ದ ಮಾಧ್ಯಮ ಕ್ಷೇತ್ರ ಆನಂತರದಲ್ಲಿ ಅಪಾರ ಬದಲಾವಣೆಗಳಿಗೆ ಒಳಪಟ್ಟಿತು. ಸಾಮಾಜಿಕ ಮಾಧ್ಯಮಗಳ ಭರಾಟೆ ಪತ್ರಕರ್ತರಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ಸುದ್ದಿಗಳ ಸೃಷ್ಟಿ ಎಗ್ಗಿಲ್ಲದೇ ನಡೆಯುತ್ತಿದ್ದು ಸುಳ್ಳು ಸುದ್ದಿ, ಉದ್ದೇಶಪೂರ್ವಕವಾಗಿ ಹರಡುವ ಸುದ್ದಿ, ಚಾರಿತ್ರ್ಯ ವಧೆ ಮಾಡುವ ಸುದ್ದಿಗಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ‘ಪತ್ರಕರ್ತರ ವೃತ್ತಿ ಜವಾಬ್ದಾರಿಯುತವಾಗಿದ್ದು, ಬರೆಯುವ ವಿಚಾರಗಳು ಪ್ರತಿಯೊಬ್ಬರ ಮನೆ-ಮನ ಮುಟ್ಟುವಂತಿರಬೇಕು. ಸ್ವಾರ್ಥ ಪತ್ರಕರ್ತ ಸಮಾಜಕ್ಕೆ ಕಂಟಕನಾಗುತ್ತಾನೆ. ಪತ್ರಕರ್ತ ನಡೆಯುವ ದಾರಿ ಇತರರಿಗೆ ಮಾದರಿಯಾಗಿರಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಕೆಲವು ಬ್ಲಾಕ್‌ಮೇಲ್ ಪತ್ರಕರ್ತರು ಹುಟ್ಟಿಕೊಂಡಿದ್ದು ಅಂತವರು ಸಂಘದಲ್ಲಿದ್ದರೆ ದಯವಿಟ್ಟು ಸಂಘದಿಂದ ತಾವೇ ಹೊರಹೋಗಬೇಕು’ ಎಂದು ಎಚ್ಚರಿಸಿದ ಅವರು, ಕೆಲವರು ಪತ್ರಿಕಾಧರ್ಮ ಮರೆತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಅಂತಹವರನ್ನು ಸುದ್ದಿಮನೆಯಿಂದ ಹೊರಹಾಕಬೇಕು’ ಎಂದು ಹೇಳಿದರು.

ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚವಡಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ.ಷರೀಫನವರ, ಜಿಲ್ಲಾ ಕಾರ್ಯದರ್ಶಿ ಶಾಂತಕುಮಾರ ಹಂಪಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಕುದರಿಮೋತಿ ಇದ್ದರು.

ಅನಘಾ ಕುಲಕರ್ಣಿ ಭರತನಾಟ್ಯ ಪ್ರದರ್ಶಿಸಿದರು. ಶ್ರೇಯಾ ಪಾಂಡ್ರೆ ಯೋಗಾಸನ ಪ್ರದರ್ಶಿಸಿದರು. ರಾಜೇಶ್ವರಿ ಕಲಾ ಕುಟೀರದ ವಿದ್ಯಾರ್ಥಿಗಳು ರಾಜಸ್ಥಾನಿ ನೃತ್ಯ ಪ್ರಸ್ತುತಪಡಿಸಿದರು. ಮಲ್ಲು ಕಳಸಾಪೂರ ಪ್ರಾರ್ಥಿಸಿದರು. ಆನಂದಯ್ಯ ವಿರಕ್ತಮಠ ನಿರೂಪಿಸಿದರು. ಶಿವಕುಮಾರ ಕುಷ್ಟಗಿ ವಂದಿಸಿದರು.

₹20 ಲಕ್ಷ ಅನುದಾನ ಘೋಷಣೆ

ಸರ್ಕಾರ ಹಾಗೂ ಜನಸಾಮಾನ್ಯರ ನಡುವಿನ ಕೊಂಡಿಯಾಗಿ ಪತ್ರಿಕಾರಂಗವು ಕೆಲಸ ನಿರ್ವಹಿಸುತ್ತಿದ್ದು, ಪತ್ರಕರ್ತರು ತಾವು ಕೆಲಸ ಮಾಡುವ ಸಂಸ್ಥೆಯ ಆಸ್ತಿಯಾಗಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

‘ಸರ್ಕಾರ ಹಾಗೂ ಅಧಿಕಾರಿ ವರ್ಗವನ್ನು ಎಚ್ಚರಿಸುವ ಹಕ್ಕು, ಅವಕಾಶ ಪತ್ರಿಕಾರಂಗಕ್ಕಿದೆ. ಆದರೆ, ಇಂತಹ ಅವಕಾಶಗಳನ್ನು ಬಳಸಿಕೊಂಡು ಕೆಲವು ಪತ್ರಕರ್ತರು ತಮ್ಮ ಎಲ್ಲೆಯನ್ನು ಮೀರುತ್ತಿದ್ದಾರೆ, ಅದು ಸರಿಯಲ್ಲ’ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪತ್ರಿಕಾ ಭವನದ ಅಭಿವೃದ್ಧಿಗೆ ಇಲಾಖೆ ವತಿಯಿಂದ ₹20 ಲಕ್ಷ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಬಸವರಾಜ ಹೊರಟ್ಟಿ ಅವರ ತಾಯಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟ್‌ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ವರದಿಗಾರರಿಗೆ ಪ್ರತಿವರ್ಷ ಪ್ರಶಸ್ತಿ ನೀಡಲು ₹2.51 ಲಕ್ಷ ದತ್ತಿನಿಧಿ ಸ್ಥಾಪಿಸಲು ಜಿಲ್ಲಾ ಸಂಘಕ್ಕೆ ಚೆಕ್ ನೀಡಲಾಗಿದೆ
ಡಾ.ಬಸವರಾಜ ಧಾರವಾಡ, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.