ADVERTISEMENT

ಮುಂಡರಗಿ: ಬಿತ್ತನೆ ಬೀಜ ಸಾಗಿಸುತ್ತಿದ್ದ ಅಧಿಕಾರಿಯನ್ನು ಪೊಲೀಸರಿಗೆ ಒಪ್ಪಿಸಿದ ರೈತರು

ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 13:54 IST
Last Updated 10 ಜೂನ್ 2023, 13:54 IST
ಮುಂಡರಗಿ ರೈತ ಸಂಪರ್ಕ ಕೇಂದ್ರದಿಂದ ಅನಧಿಕೃತವಾಗಿ ಬಿತ್ತನೆ ಬೀಜವನ್ನು ಸಾಗಿಸುತ್ತಿದ್ದ ಕೃಷಿ ಇಲಾಖೆಯ ಅಧಿಕಾರಿಯ ವಾಹನಕ್ಕೆ ಮುತ್ತಿಗೆ ಹಾಕಿದ ರೈತರು. ಆರೋಪಿ (ಎಡದಿಂದ ಎರಡನೆಯವರು).
ಮುಂಡರಗಿ ರೈತ ಸಂಪರ್ಕ ಕೇಂದ್ರದಿಂದ ಅನಧಿಕೃತವಾಗಿ ಬಿತ್ತನೆ ಬೀಜವನ್ನು ಸಾಗಿಸುತ್ತಿದ್ದ ಕೃಷಿ ಇಲಾಖೆಯ ಅಧಿಕಾರಿಯ ವಾಹನಕ್ಕೆ ಮುತ್ತಿಗೆ ಹಾಕಿದ ರೈತರು. ಆರೋಪಿ (ಎಡದಿಂದ ಎರಡನೆಯವರು).   

ಮುಂಡರಗಿ (ಗದಗ ಜಿಲ್ಲೆ): ಪಟ್ಟಣದ ರೈತ ಸಂಪರ್ಕ ಕೇಂದ್ರದಿಂದ ಶನಿವಾರ ಅನಧಿಕೃತವಾಗಿ ಬಿತ್ತನೆ ಬೀಜವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಕೃಷಿ ಇಲಾಖೆಯ ಅಧಿಕಾರಿಯನ್ನು ತಡೆದ ರೈತರು ಬೀಜದ ಚೀಲ ಸಮೇತ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ರೈತ ಸಂಪರ್ಕ ಕೇಂದ್ರದಿಂದ ಕೃಷಿ ಅಧಿಕಾರಿ ಬಿ. ನಿಂಗಪ್ಪ ಪ್ರಾಯೋಗಿಕ ಬಿತ್ತನೆಯ ಶೇಂಗಾ ಕಾಯಿಯ ಚೀಲವನ್ನು ತಮ್ಮ ಸ್ವಂತ ಕಾರಿನಲ್ಲಿ ಸಾಗಿಸುತ್ತಿದ್ದರು. ವಾಹನಕ್ಕೆ ಮುತ್ತಿಗೆ ಹಾಕಿದ ರೈತರು ಅಧಿಕಾರಿಯನ್ನು ಸ್ಥಳದಲ್ಲಿಯೆ ತರಾಟೆಗೆ ತಗೆದುಕೊಂಡರು. ‘ರೈತರಿಗೆ ವಿತರಿಸಬೇಕಾದ ಶೇಂಗಾ ಕಾಯಿಗಳನ್ನು ಅನಧಿಕೃತವಾಗಿ ಎಲ್ಲಿಗೆ ಸಾಗಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.

‘ಹಮ್ಮಿಗಿ ಗ್ರಾಮದಲ್ಲಿರುವ ನಮ್ಮ ಸಂಬಂಧಿಗಳಿಗೆ ಶೇಂಗಾ ಕಾಯಿಗಳನ್ನು ಒಯ್ಯುತ್ತಿದ್ದೇನೆ’ ಎಂದು ಅಧಿಕಾರಿ ಉತ್ತರಿಸಿದ್ದಾರೆ. ಆಗ ಆಕ್ರೋಶಗೊಂಡ ರೈತರು ‘ಬಿತ್ತನೆ ಬೀಜ, ಗೊಬ್ಬರ, ತಾಡಪತ್ರಿ ಮೊದಲಾದವುಗಳಿಗಾಗಿ ಅರ್ಜಿ ಸಲ್ಲಿಸಿ ಹಲವು ದಿನಗಳು ಗತಿಸಿದ್ದರೂ ರೈತರಿಗೆ ಅವುಗಳನ್ನು ಸಮರ್ಪಕವಾಗಿ ವಿತರಿಸಿಲ್ಲ. ಆದರೆ ಯಾವ ದಾಖಲೆಗಳೂ ಇಲ್ಲದೇ ನಿಮಗೆ ಬೇಕಾದವರಿಗೆ ಹೇಗೆ ಬೀಜಗಳನ್ನು ಒಯ್ಯುತ್ತೀರಿ?’ ಎಂದು ಪ್ರಶ್ನಿಸಿದರು.

ADVERTISEMENT

‘ಸರ್ಕಾರವು ನೀಡಿರುವ ಪ್ರಾಯೋಗಿಕ ಶೇಂಗಾ ಬಿತ್ತನೆ ಬೀಜದ ಕಾಯಿಗಳನ್ನು ರೈತರಿಗೆ ತಲುಪಿಸದೇ ಅಧಿಕಾರಿಗಳು ತಮ್ಮ ಮನೆ ಬಳಕೆಗೆ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ರೈತರು ಆರೋಪಿಸಿದರು. ನಂತರ ರೈತರು ಬೀಜ ಸಾಗಿಸುತ್ತಿದ್ದ ವಾಹನ ಹಾಗೂ ಶೇಂಗಾ ಕಾಯಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.

ರೈತ ಮುಖಂಡರಾದ ಸುರೇಶ ಹಲವಾಗಲಿ, ಅಡಿವೆಪ್ಪ ಚಲುವಾದಿ, ಶರಣಪ್ಪ ಚನ್ನಳ್ಳಿ, ಯಮನೂರಪ್ಪ ಅಡವಿಹಳ್ಳಿ, ನಿಂಗಪ್ಪ ಬಸಾಪೂರ, ಸಿದ್ದಪ್ಪ ಪೂಜಾರ, ಲಕ್ಷ್ಮಣ ವಾಲಿಕಾರ, ಶಿವು ವಾಲಿಕಾರ ಇದ್ದರು.

ಕೃಷಿ ಅಧಿಕಾರಿ 20 ಕೆ.ಜಿ ತೂಕದ ಒಂದು ಬಿತ್ತನೆ ಬೀಜದ ಚೀಲ ಸಾಗಿಸುತ್ತಿದ್ದರು. ಸೋಮವಾರ ತಾಲ್ಲೂಕು ಕೃಷಿ ಅಧಿಕಾರಿಯೊಂದಿಗೆ ಚರ್ಚಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಮಳೆಯಾಗಿದ್ದರಿಂದ ರೈತರಿಗೆ ಬಿತ್ತನೆ ಬೀಜ ವಿತರಿಸುವಂತೆ ಸೂಚಿಸಲಾಗಿತ್ತು. ರೈತರು ಅರೋಪಿಸಿರುವಂತೆ ಅಧಿಕಾರಿಯು ಬೀಜ ಸಾಗಿಸಿರುವ ಕುರಿತು ಸೋಮವಾರ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

-ವೆಂಕಟೇಶಮೂರ್ತಿ ಟಿ.ಸಿ. ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ

ರೈತರಿಗೆ ಬೀಜ ವಿತರಿಸಲು ಕೇಂದ್ರಕ್ಕೆ ಬಂದಿದ್ದೆ. ಕೆಲಸ ಮುಗಿದ ನಂತರ ಅಧಿಕೃತ ದಾಖಲೆಗಳನ್ನು ಪಡೆದು ನಮ್ಮ ಸಂಬಂಧಿಯೊಬ್ಬರಿಗೆ ಶೇಂಗಾ ಕಾಯಿ ಒಯ್ಯುತ್ತಿದ್ದೆ. ಇದರಲ್ಲಿ ಯಾವ ಅವ್ಯವಹಾರವೂ ಇಲ್ಲ. -ಬಿ.ನಿಂಗಪ್ಪ ಸಹಾಯಕ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.