
ಲಕ್ಷ್ಮೇಶ್ವರ: ತಾಲ್ಲೂಕಿನ ರಾಮಗೇರಿ ಗ್ರಾಮದ ಈರಮ್ಮ ಶಿವಪ್ಪ ಮಡಿವಾಳರ ನಿವಾಸದಲ್ಲಿ ಗುರುವಾರ ಗರ್ಭ ಧರಿಸಿರುವ ಎರಡು ಹಸುಗಳಿಗೆ ಸೀಮಂತ ಕಾರ್ಯ ನಡೆಸಲಾಯಿತು.
ಭಾರತೀಯ ಸಂಪ್ರದಾಯದಲ್ಲಿ ಚೊಚ್ಚಿಲ ಬಸುರಿ ಮಹಿಳೆಗೆ ತವರು ಮತ್ತು ಗಂಡನ ಮನೆಯವರು ಸೀಮಂತ ಕಾರ್ಯ ನಡೆಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಅದರಂತೆ ಹಸುಗಳನ್ನು ಮನೆಯ ಹೆಣ್ಣು ಮಕ್ಕಳಂತೆ ಜೋಪಾನ ಮಾಡಿರುವ ಈರಮ್ಮ ಅವರು ಎರಡು ಹಸುಗಳು ಪ್ರಥಮ ಬಾರಿಗೆ ಗರ್ಭ ಧರಿಸಿದ ಹಿನ್ನೆಲೆಯಲ್ಲಿ ಸೀಮಂತ ಕಾರ್ಯವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರೈತ ಹಾಗೂ ಪಂಚ ಗ್ಯಾರಂಟಿ ಸಮಿತಿಗಳ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ‘ನನ್ನ ತಾಯಿ ಎರಡೂ ಆಕಳುಗಳನ್ನು ಸ್ವಂತ ಹೆಣ್ಣು ಮಕ್ಕಳಂತೆ ಜೋಪಾನ ಮಾಡಿದ್ದಾರೆ. ಆಕಳುಗಳು ನಮ್ಮ ಮನೆಗೆ ಬಂದ ಮೇಲೆ ನಮಗೆ ಒಳ್ಳೆಯದಾಗಿದೆ. ಹೀಗಾಗಿ ಅವು ಗರ್ಭ ಧರಿಸಿದ್ದರಿಂದ ಸಾಂಪ್ರದಾಯ ಪದ್ಧತಿಯಂತೆ ಸೀಮಂತ ಮಾಡಿದ್ದೇವೆ. ಗೋ ಮಾತೆಗಳ ಸೀಮಂತ ಕಾರ್ಯಕ್ಕೆ ಗ್ರಾಮದ ಹತ್ತಾರು ಮಹಿಳೆಯರು ಆಗಮಿಸಿ ಗೋ ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಡಿ ತುಂಬಲಾಗಿದೆ’ ಎಂದು ಹೇಳಿದರು.
‘ಹಿಂದೂಗಳಲ್ಲಿ ಗೋ ಮಾತೆಗೆ ಪೂಜ್ಯನೀಯ ಸ್ಥಾನ ಇದೆ. ದೇಶೀ ಆಕಳುಗಳನ್ನು ಸಾಕುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳು ಇವೆ. ಅವುಗಳ ಹಾಲು, ತುಪ್ಪ, ಬೆಣ್ಣೆ, ಮೊಸರು, ಮೂತ್ರ, ಸೆಗಣಿ ಎಲ್ಲದಕ್ಕೂ ಬೆಲೆ ಇದೆ. ಕಾರಣ ರೈತರು ನಮ್ಮ ಪುರಾತನ ದೇಶೀ ಆಕಳುಗಳನ್ನು ಜೋಪಾನ ಮಾಡಲು ಮುಂದಾಗಬೇಕು’ ಎಂದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಬೇವಿನಮರದ, ಮಾರ್ತಾಂಡಪ್ಪ ಗಂಜಿಗಟ್ಟಿ, ಪರಸಪ್ಪ ಹುನಶಿಮರದ, ನಬಿಸಾಬ್ ಅಣ್ಣಿಗೇರಿ, ಶಿವಾನಂದ ಜುಲ್ಪಿ, ಲಕ್ಷ್ಮಣ ಯರಗುಪ್ಪಿ, ಎಸ್.ಬಿ. ಸುಂಕದ, ಹನಮಂತಪ್ಪ ಹುಣಸಿಮರದ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.