ADVERTISEMENT

ಉನ್ನತಿ ತರಬೇತಿ: ಗ್ರಾಮೀಣ ಜನರ ಆಶಾಕಿರಣ

30 ದಿನಗಳ ತರಬೇತಿಗೆ ಚಾಲನೆ ನೀಡಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:13 IST
Last Updated 1 ಜನವರಿ 2026, 6:13 IST
ಗದಗ ತಾಲ್ಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆರಂಭಗೊಂಡ 30 ದಿನಗಳ ತರಬೇತಿ ಶಿಬಿರವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ ಉದ್ಘಾಟಿಸಿದರು
ಗದಗ ತಾಲ್ಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆರಂಭಗೊಂಡ 30 ದಿನಗಳ ತರಬೇತಿ ಶಿಬಿರವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ ಉದ್ಘಾಟಿಸಿದರು   

ಗದಗ: ‘ಗ್ರಾಮೀಣ ಜನರ ಕೌಶಲ ಗುರುತಿಸಿ, ಅವರ ಜೀವನೋಪಾಯಕ್ಕೆ ಅಗತ್ಯವಾದ ತರಬೇತಿ ನೀಡಲು ಉನ್ನತಿ ಯೋಜನೆ ಪ್ರಮುಖ ಕಾರ್ಯಕ್ರಮವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ ಹೇಳಿದರು.

ತಾಲ್ಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಎಸ್‌ಬಿಐ- ಎಎಸ್ಎಫ್- ಆರ್‌ಸೆಟಿ ಹುಲಕೋಟಿ ಇವುಗಳ ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 60 ದಿನಗಳಿಗೂ ಹೆಚ್ಚು ಅಕೌಶಲ ದಿನಗಳನ್ನು ಪೂರೈಸಿದವರಿಗಾಗಿ ಹಮ್ಮಿಕೊಂಡ 30 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಜೀವನದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಜ್ಞಾನ ಮತ್ತು ಕೌಶಲ ವೃದ್ಧಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯು ಉಚಿತ ಊಟ, ವಸತಿ ಹಾಗೂ ಸಹಾಯಧನ ನೀಡುವ ಮೂಲಕ ಕೌಶಲ ಮತ್ತು ಜ್ಞಾನ ಹೆಚ್ಚಿಸಲು ಉನ್ನತಿ ತರಬೇತಿ ಕಾರ್ಯಕ್ರಮ ರೂಪಿಸಿದ್ದು, ಇದು ಗ್ರಾಮೀಣ ಜನರ ಆಶಾಕಿರಣವಾಗಿದೆ’ ಎಂದರು.

ADVERTISEMENT

ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಂತೋಷ ಎಂ.ವಿ. ಮಾತನಾಡಿ, ‘ಅಂಕ ಪಟ್ಟಿಯನ್ನು ನೋಡಿ ಉದ್ಯೋಗ ನೀಡುವ ಕಾಲ ಈಗಿನದಲ್ಲ. ಇಂದಿನ ಕಾಲದಲ್ಲಿ ಯಾವುದೇ ಕೆಲಸ ಸಣ್ಣದು ಅಲ್ಲ. ಮಾಡುವ ಕೆಲಸದಲ್ಲಿ ನೈಪುಣ್ಯತೆ ಇದ್ದು, ಅದರಲ್ಲಿ ಉತ್ತಮ ಕೌಶಲ್ಯವಂತರಾಗಿದ್ದರೆ ಕೆಲಸ ನೀಡಲು ಅನೇಕ ಸಂಘ, ಸಂಸ್ಥೆಗಳು ಮುಂದೆ ಬರುತ್ತವೆ. ಕೌಶಲ ಉಳ್ಳವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಬ್ಯಾಂಕ್‌ಗಳ ಸನ್ನದ್ದವಾಗಿವೆ’ ಎಂದರು.

‘ದೇಶದ ಪ್ರಗತಿಗೆ ಕೌಶಲ ಹೊಂದಿರುವ ಯುವಜನರ ಅಗತ್ಯ ಇದೆ. ಸರ್ಕಾರದ ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೌಶಲ ಪಡೆದು ಉತ್ತಮ ಸಾಧನೆ ಮಾಡಿದ ಹಲವು ಜನರು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿ, ನೂರಾರು ಜನರಿಗೆ ಉದ್ಯೋಗ ನೀಡಿ ನೌಕರರ ಆರ್ಥಿಕ ಸ್ಥಿತಿ ವೃದ್ಧಿಸಿದ್ದಾರೆ’ ಎಂದು ತಿಳಿಸಿದರು.

ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣ ಕುಮಾರ ಎಸ್.ಎಚ್. ಮತ್ತು ಎನ್ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕ ರಘುನಾಥಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೀರೇಶ ಬಸನಗೌಡ್ರ, ಅನಿಲಕುಮಾರ ಕೆ., ಸಹನಾ ಕೋಟೆಕಲ್ಲ, ಮಲ್ಲಮ್ಮ ರಡ್ಡೇರ, ರೇಣುಕಾ ಪಲ್ಲೇದ, ನೀಲಾ ಸಂಗನಾಳ ಇದ್ದರು.

ಹುಲಕೋಟಿ ಆರ್‌–ಸೆಟಿ ತರಬೇತುದಾರ ನವೀನ ಹಿರೇಗೌಡ್ರ ನಿರೂಪಿಸಿ, ವಂದಿಸಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಮಿಕರ ಕೌಶಲದ ನೆಲೆಯನ್ನು ನವೀಕರಿಸಿ ಅವರ ಜೀವನೋಪಾಯ ಸುಧಾರಿಸುವ ಮಹತ್ತರ ಕಾರ್ಯವು ಉನ್ನತಿ ತರಬೇತಿಯ ಆಶಯವಾಗಿದೆ
–ಎಂ.ವಿ.ಚಳಗೇರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.