ADVERTISEMENT

ಗದಗ: ಗ್ರಾಮ ಸ್ವರಾಜ್ಯಕ್ಕೆ ಕೊಡಲಿ ಪೆಟ್ಟು: ಮೊಯಿಲಿ

ಗ್ರಾಮಸಭೆ ನಿರ್ಣಯಗಳಿಗೆ ಮಾನ್ಯತೆ ಕೊಡದೇ ಮತ್ತೆ ಅಧಿಕಾರ ಕೇಂದ್ರೀಕರಣಕ್ಕೆ ಒತ್ತು: ಆತಂಕ

​ಪ್ರಜಾವಾಣಿ ವಾರ್ತೆ
Published 11 ಮೇ 2022, 2:54 IST
Last Updated 11 ಮೇ 2022, 2:54 IST
ಗದಗ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಪಂಚಾಯತ್‌ರಾಜ್‌ ದಿನಾಚರಣೆಯನ್ನು ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯಿಲಿ ಉದ್ಘಾಟಿಸಿದರು
ಗದಗ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಪಂಚಾಯತ್‌ರಾಜ್‌ ದಿನಾಚರಣೆಯನ್ನು ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯಿಲಿ ಉದ್ಘಾಟಿಸಿದರು   

ಗದಗ: ‘ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಗ್ರಾಮಸಭೆ ನಿರ್ಣಯಗಳಿಗೆ ಮಾನ್ಯತೆ ಕೊಡದೇ ಮತ್ತೆ ಅಧಿಕಾರ ಕೇಂದ್ರೀಕರಣಕ್ಕೆ ಒತ್ತು ನೀಡುವ ಮೂಲಕ ಗ್ರಾಮ ಸ್ವರಾಜ್ಯಕ್ಕೆ ಕೊಡಲಿ ಪೆಟ್ಟು ಹಾಕುತ್ತಿದೆ. ಅಲ್ಲದೇ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸದಿರುವುದು ದೊಡ್ಡ ದುರಂತ. ಈ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪುನರ್ ವಿಮರ್ಶಿಸಬೇಕು’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯಿಲಿ ಹೇಳಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ರಾಜೀವ್‌ಗಂಧಿ ಪಂಚಾಯತ್‌ರಾಜ್‌ ಸಂಘಟನೆ ಹಾಗೂ ಕೆ.ಎಚ್.ಪಾಟೀಲ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಕರ್ನಾಟಕ ಪಂಚಾಯತ್‌ರಾಜ್‌ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರ ಕೇಂದ್ರೀಕರಣದಿಂದ ಲಂಚ, ಭ್ರಷ್ಟಾಚಾರ ಹೆಚ್ಚುತ್ತದೆ. ವಿಕೇಂದ್ರೀಕರಣವೇ ಇದಕ್ಕೆ ಮದ್ದು. ಗ್ರಾಮ ಸ್ವರಾಜ್ಯ ಕಲ್ಪನೆ ಅನುಷ್ಠಾನಕ್ಕೆ ಎಲ್ಲರೂ ಮುಂದಾಗಬೇಕು. ಅಧಿಕಾರ ವಿಕೇಂದ್ರೀಕರಣ ಮಾಡಲು ರಾಜಕೀಯ ಇಚ್ಛಾಶಕ್ತಿ ಇರಬೇಕು ಎಂದು ಹೇಳಿದರು.

ADVERTISEMENT

ಎಲ್ಲ ವರ್ಗದವರಿಗೂ ಅಧಿಕಾರ ನೀಡುವ ಉದ್ದೇಶದಿಂದ ರಾಜೀವ್‌ ಗಾಂಧಿ ಅವರ ಕನಸನ್ನು ಪಿ.ವಿ.ನರಸಿಂಹ
ರಾಯರು ಸಂವಿಧಾನದ 73 ಹಾಗೂ 74 ನೇ ತಿದ್ದುಪಡಿ ಅನ್ವಯ ಕಾಯ್ದೆ ರೂಪಿಸಿದ ಕೀರ್ತಿ ಕರ್ನಾಟಕಕ್ಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೂ ಶೇ 33ರಷ್ಟು ಮೀಸಲಾತಿ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೂ ಮೀಸಲಾತಿ ನೀಡುವ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿ, 1993 ಮೇ 10 ರಂದು ಅನುಷ್ಠಾನ ಮಾಡಲಾಯಿತು ಎಂದು ಹೇಳಿದರು.

ತಳಮಟ್ಟದ ಜನರಿಗೆ ಅಧಿಕಾರವನ್ನು ನೀಡುವ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ. ಸಾಮಾಜಿಕ ನ್ಯಾಯ ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಆರ್.ಯಾವಗಲ್ಲ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಗ್ರಾಮೀಣರ ಅಧಿಕಾರ ಕಸಿದುಕೊಂಡು, ಮತ್ತೆ ಅಧಿಕಾರ ಕೇಂದ್ರೀಕರಣಕ್ಕೆ ಮುಂದಾಗುತ್ತಿದೆ. ಸರ್ಕಾರ ದುರುದ್ದೇಶದಿಂದಲೇ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಮುಂದೂಡುತ್ತಿದೆ ಎಂದು ಆರೋಪಿಸಿದರು.

ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣಸ್ವಾಮಿ,ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿದರು. ಮಾಜಿ ಶಾಸಕರಾದ ಜಿ.ಎಸ್. ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಶ್ರೀಶೈಲಪ್ಪ ಬಿದರೂರ, ರಾಮಕೃಷ್ಣ ದೊಡ್ಡಮನಿ, ವಿ.ವೈ. ಘೋರ್ಪಡೆ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಪ್ರಧಾನ ಕಾರ್ಯದರ್ಶಿ ಸತೀಶ, ಗದಗ ಜಿಲ್ಲಾ ಸಂಯೋಜಕ ಚನ್ನಪ್ಪ ಜಗಲಿ, ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರ, ವಸಂತ ಲದ್ವಾ, ರಾಜಾ ದೇಸಾಯಿ, ಹನಮಂತಪ್ಪ ಪೂಜಾರ, ಜಿ.ಎಂ.ದಂಡಿನ ಸೇರಿ ಅನೇಕರು ವೇದಿಕೆಯಲ್ಲಿದ್ದರು.

ನಿವೃತ್ತ ಶಿಕ್ಷಕ ಜೆ.ಕೆ. ಜಮಾದಾರ ನಿರೂಪಿಸಿದರು.

‘ಸಾಮಾಜಿಕ ಕ್ರಾಂತಿ ಮಾಡಿದ ಕಾಂಗ್ರೆಸ್‌’

‘ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನ್ವಯ ಕಾಯ್ದೆ ಅನುಷ್ಠಾನಕ್ಕೆ ತಂದ ಕರ್ನಾಟಕದ ಈ ಕಾನೂನು ಕ್ರಾಂತಿಕಾರಕ. ಬಡವರಿಗೆ ರಾಜಕೀಯ ಶಕ್ತಿ ತುಂಬಲು ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ಕ್ರಾಂತಿ ಮಾಡಿದೆ’ ಎಂದು ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ಗ್ರಾಮ ಸ್ವರಾಜ್ ಕಾನೂನನ್ನು ಅನುಷ್ಠಾನ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ. ಇದಕ್ಕಾಗಿ ಕಾನೂನಾತ್ಮಕ ಹೋರಾಟವೂ ಅಗತ್ಯ ಎಂದು ಹೇಳಿದರು.

ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ ಎಂಬುದಕ್ಕೆ ಪಿಎಸ್‍ಐ ಹುದ್ದೆಯ ಹಗರಣವೇ ಸಾಕ್ಷಿ

ಎಚ್.ಕೆ. ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.