
ಗದಗ: ‘ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲುವಿಕೆಯಿಂದ ವೀರಶೈವ ಸಮಾಜದ ಹಿರಿಯ ಕೊಂಡಿ ಕಳಚಿದಂತಾಗಿದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕೋಟಿ ಹೇಳಿದರು.
ನಗರದ ವೀರಶೈವ ವಾಚನಾಲಯದ ಆವರಣದಲ್ಲಿರುವ ಮಹಾಸಭಾದ ಕಾರ್ಯಾಲಯದಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ನಡೆದ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಶಿಕ್ಷಣ ಕಲ್ಪಿಸುವ ಬೃಹತ್ ಕಾರ್ಯವನ್ನು ಕೈಗೊಂಡ ಶಾಮನೂರು 6 ಬಾರಿಗೆ ಶಾಸಕರಾಗಿ, ಎರಡು ಬಾರಿಗೆ ಸಚಿವರಾಗಿ, ಒಮ್ಮೆ ಸಂಸದರಾಗಿದ್ದರು. ವೀರಶೈವ-ಲಿಂಗಾಯತ ಸಮುದಾಯವನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಒಗ್ಗೂಡಿಸಿದ ಹಿರಿಯ ಜೀವಿಯ ಅಗಲುವಿಕೆಯಿಂದ ತುಂಬಲಾರದಷ್ಟು ಹಾನಿಯಾಗಿದೆ ಎಂದರು.
ಮಹಾಸಭಾದ ಪದಾಧಿಕಾರಿಗಳಾದ ಶೋಭಾ ಗುಗ್ಗರಿ, ಚನ್ನವೀರಪ್ಪ ದುಂದೂರ, ಸಾವಿತ್ರಿ ಹೂಗಾರ ಶಾಮನೂರು ಅವರ ವ್ಯಕ್ತಿತ್ವ ಸಾಧನೆ ಕುರಿತು ಮಾತನಾಡಿದರು.
ಬಳಿಕ ಎರಡು ನಿಮಿಷ ಮೌನ ಆಚರಿಸಲಾಯಿತು.
ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಂಗಮೇಶ ಕವಳಿಕಾಯಿ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಜಿ.ಹಿರೇಮಠ ನಿರೂಪಿಸಿದರು. ವಿಶ್ವನಾಥ ಹಳ್ಳಿಕೇರಿ ವಂದಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಶರಣಪ್ಪ ಗದ್ದಿಕೇರಿ, ಮೋಹನ ದೊಡ್ಡಕುಂಡಿ, ಶಿವಕುಮಾರ ಬೇವಿನಮರದ, ಸುಧಾ ಚಳ್ಳಮರದ, ಲಕ್ಷ್ಮೀ ಗುರಿಕಾರ, ರತ್ನವ್ವ ಕಲ್ಲೂರ, ವಿಜಯಲಕ್ಷ್ಮೀ ಕುಸೂಗಲ್ಲ, ಶಂಭು ಕಾರಕಟ್ಟಿ, ರಮೇಶ ಪಿಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.