ಗದಗ: ತಾಯಿಯಿಂದ ಬೇರ್ಪಟ್ಟು, ಹತ್ತು ದಿನ ಊಟವಿಲ್ಲದೇ ನಿತ್ರಾಣಗೊಂಡಿದ್ದ ಹುಲಿಮರಿಯು ಗದಗ ಮೃಗಾಲಯದ ಸಿಬ್ಬಂದಿಯ ಕಾಳಜಿ, ಆರೈಕೆಯಿಂದ ದಷ್ಟಪುಷ್ಟವಾಗಿ ಬೆಳೆಯುತ್ತಿದೆ. ಅದಕ್ಕೆ ‘ವೀರೂ’ ಎಂಬ ಹೆಸರಿಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಭಾಗದ ವಿರ್ನೋಲಿ ರೇಂಜ್‌ನ ಗ್ರಾಮದ ಬಳಿ ಏಪ್ರಿಲ್ 27ರಂದು ಹುಲಿ ಮರಿ ಸೆರೆ ಸಿಕ್ಕಿತು. ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್) ವ್ಯಾಪ್ತಿಯಲ್ಲಿ ನಿಯಮಿತವಾಗಿ ಕ್ಯಾಮೆರಾ ಟ್ರ್ಯಾಪಿಂಗ್ ಇರುತ್ತದೆ. ಆದರೆ ಈ ಹುಲಿಮರಿ ಹಳಿಯಾಳ ವಿಭಾಗಕ್ಕೆ ಹೇಗೆ ಬಂತು? ತಾಯಿಯಿಂದ ಹೇಗೆ ಬೇರ್ಪಟ್ಟಿತು ಎಂಬುದು ಗೊತ್ತಾಗಿಲ್ಲ.
ತಾಯಿ ಹುಲಿಯನ್ನು ಪತ್ತೆ ಮಾಡಿ, ಅದರೊಂದಿಗೆ ಮರಿಯನ್ನು ಜೊತೆಗೂಡಿಸುವ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಯತ್ನ ಫಲಿಸಲಿಲ್ಲ. 10 ದಿನಗಳಿಂದ ಊಟ ಮಾಡದೇ ನಿತ್ರಾಣಗೊಂಡ ಹುಲಿಮರಿಯನ್ನು ಬೋನಿನಲ್ಲಿ ಇಟ್ಟುಕೊಂಡು ಹೀಗೆ ಪ್ರಯತ್ನ ಮುಂದುವರಿಸಿದರೆ ಪ್ರಯೋಜನವಾಗದು ಎಂದು ಅದನ್ನು ಗದಗ ಮೃಗಾಲಯಕ್ಕೆ ಕಳುಹಿಸಿಕೊಟ್ಟರು.
ಮೃಗಾಲಯಕ್ಕೆ ತಂದಾಗ ಹುಲಿಮರಿಯ ತೂಕ 13.5 ಕೆಜಿ ಇತ್ತು. ಮೂರೂವರೆ ತಿಂಗಳ ವಯಸ್ಸಿನ ಹುಲಿಮರಿಯ ತೂಕ ಅಂದಾಜು 18ರಿಂದ 20 ಕೆಜಿ ಆಸುಪಾಸಿನಲ್ಲಿ ಇರುತ್ತದೆ. ಮೃಗಾಲಯದಲ್ಲಿ ಚೆನ್ನಾಗಿ ತಿನ್ನತೊಡಗಿದ ಹುಲಿಮರಿ ಎರಡು ತಿಂಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡಿತು. ಕಳೆದ ವಾರ ಅದರ ತೂಕ 23.5 ಕೆಜಿ ತಲುಪಿತ್ತು. ಅದಕ್ಕೆ ಪ್ರತಿದಿನ ಒಂದು ಕೆಜಿ ಚಿಕನ್ ಮತ್ತು ಒಂದು ಕೆಜಿ ಎಮ್ಮೆ ಮಾಂಸ ಕೊಡಲಾಗುತ್ತದೆ.
‘3 ರಿಂದ 12 ತಿಂಗಳ ಅವಧಿಯಲ್ಲಿ ಹುಲಿಮರಿಗಳು ಅತಿ ವೇಗದಿಂದ ಬೆಳೆಯುತ್ತವೆ. ಒಂದು ಕೆಜಿ ಮಾಂಸ ಭಕ್ಷಿಸಿದರೆ, 300 ಗ್ರಾಂ ತೂಕ ಹೆಚ್ಚುತ್ತದೆ. ಒಂದೂವರೆ ವರ್ಷ ತುಂಬುವ ವೇಳೆಗೆ ವಯಸ್ಕ ಹುಲಿಯಂತೆ ಕಾಣುತ್ತದೆ. ಗದಗ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಧನಲಕ್ಷ್ಮಿ ಮತ್ತು ಡಾ. ಮಮತಾ ಅವರ ಮಾರ್ಗದರ್ಶನದಲ್ಲಿ ಹುಲಿಮರಿ ಚೆನ್ನಾಗಿ ಬೆಳೆಯುತ್ತಿದೆ. ಇದನ್ನು ಮತ್ತೆ ಕಾಡಿಗೆ ಬಿಡುವುದಿಲ್ಲ’ ಎಂದು ಮೃಗಾಲಯದ ಅಧಿಕಾರಿ ನಿಖಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಯಿಯಿಂದ ಬೇರ್ಪಟ್ಟಿರುವುದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ‘ವೀರೂ’ಗೆ ಎರಡು ವರ್ಷ ತುಂಬಿದ ಬಳಿಕ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮತಿ ಮೇರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.ಸ್ನೇಹಾ, ಗದಗ ಮೃಗಾಲಯ ಆರ್‌ಎಫ್‌ಒ
ಹುಲಿಮರಿ ಪೋಷಣೆಗೆ ಚಂದ್ರು ಎಂಬ ವಾಚರ್‌ಗೆ ನೇಮಿಸಲಾಗಿದೆ. ಹುಲಿಯನ್ನು ಹುಲಿ ರೀತಿಯಲ್ಲೇ ಬೆಳೆಸುವ ಇಚ್ಛೆ ನಮ್ಮದು.ಅದಕ್ಕೆ ಚಂದ್ರು ಹೊರತುಪಡಿಸಿ ಮನುಷ್ಯರ ಸಂಪರ್ಕ ಬರದಂತೆ ನೋಡಿಕೊಳ್ಳಲಾಗಿದೆ.ನಿಖಿಲ್, ಅಧಿಕಾರಿ, ಗದಗ ಮೃಗಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.