ADVERTISEMENT

ಕುಷ್ಠ ರೋಗ ಕಾಲೊನಿಯಲ್ಲಿ ಕಷ್ಟಗಳ ಸರಮಾಲೆ

ಬಯಲು ಬಹಿರ್ದೆಸೆ; ನರಕಯಾತನೆಗೆ ಅನುಭಿಸುತ್ತಿರುವ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 16:25 IST
Last Updated 22 ಜೂನ್ 2018, 16:25 IST
ಗದುಗಿನ ಕುಷ್ಟರೋಗ ಕಾಲೊನಿಯಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಶೌಚಾಲಯಗಳ ಸುತ್ತ ಕಳೆ ಬೆಳೆದು ನಿಂತಿರುವುದು
ಗದುಗಿನ ಕುಷ್ಟರೋಗ ಕಾಲೊನಿಯಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಶೌಚಾಲಯಗಳ ಸುತ್ತ ಕಳೆ ಬೆಳೆದು ನಿಂತಿರುವುದು   

ಗದಗ: ‘ಮಳೆಯಾದರೆ ಕೆಸರು ಗದ್ದೆಯಂತಾಗುವ ಬಡಾವಣೆ, ಪಾಳು ಬಿದ್ದ ಶೌಚಾಲಯ, ತಿಪ್ಪೆ ರಾಶಿಯ ನಡುವೆಯೇ ಜೀವನ. ಇದು ನಗರದ ಕುಷ್ಠ ರೋಗ ಕಾಲೊನಿಯ ದುಃಸ್ಥಿತಿ.

ದಶಕದ ಹಿಂದೆ ಶಾಸಕ ಎಚ್.ಕೆ.ಪಾಟೀಲ ಅವರಿಂದ ಉದ್ಘಾಟನೆಯಾದ ಕುಷ್ಠರೋಗ ಕಾಲೊನಿ, ಈಗಲೂ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಶೌಚಾಲಯಗಳು ಪಾಳು ಬಿದ್ದಿವೆ. ನಿವಾಸಿಗಳು ಬಯಲು ಬಹಿರ್ದೆಸೆ ಅವಲಂಬಿಸಿದ್ದಾರೆ. ಬಡಾವಣೆಯ ಸುತ್ತ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಜನರು ಗಬ್ಬು ವಾಸನೆಯ ನಡುವೆಯೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇಲ್ಲಿದೆ.

ಸಾರ್ವಜನಿಕ ಬೀದಿ ದೀಪಗಳನ್ನು ಒಡೆದು ಹೋಗಿದ್ದು, ರಾತ್ರಿ ಮನೆಯಿಂದ ಹೊರಬರುವುದಕ್ಕೆ ನಿವಾಸಿಗಳು ಭಯ ಪಡುತ್ತಿದ್ದಾರೆ.
‘8ರಿಂದ 10ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ, ಇದು ಕುಡಿಯಲು ಯೋಗ್ಯವಲ್ಲ. ಕೆಲವೊಮ್ಮೆ ಸವಳು ನೀರು ಪೂರೈಕೆಯಾಗುತ್ತದೆ. ವಿಧಿ ಇಲ್ಲದೇ ಅದೇ ನೀರನ್ನು ಕುಡಿಯುತ್ತೇವೆ’ ಎನ್ನುತ್ತಾರೆ ನಿವಾಸಿಗಳು.

‘ಬಡಾವಣೆಯಲ್ಲಿರುವ ಸಮಸ್ಯೆಗಳ ಕುರಿತು ನಗರಸಭೆಗೆ ಹಾಗೂ ಎಚ್.ಕೆ.ಪಾಟೀಲರಿಗೆ ಮನವರಿಕೆ ಮಾಡಿಕೊಟ್ಟುರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯಗಳು ಇದ್ದರೂ, ಅವು ಉಪಯೋಗಕ್ಕೆ ಬರುತ್ತಿಲ್ಲ. ಹೆಣ್ಣು ಮಕ್ಕಳು ಬೆಳಕು ಹರಿಯುವ ಮುನ್ನವೇ ಅಂದರೆ ಕತ್ತಲಲ್ಲೇ ಬಹಿರ್ದೆಸೆಗೆ ಹೋಗಬೇಕಾದ ಕೆಟ್ಟ ಪರಿಸ್ಥಿತಿ ಇದೆ. ನರಕಯಾತನೆ ಅನುಭಿಸುತ್ತಿದ್ದಾರೆ’ ಎಂದು ಕಾಲೊನಿಯ ರಾಜಾಸಾಬ್‌ ಬಳ್ಳಾರಿ, ಬಾಬುಸಾಬ್‌ ಸೈಯದ್ ತಿಳಿಸಿದರು.

‘ಕಾಲೊನಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ನಗರಸಭೆಗೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಸ್ಪಂದನೆ ಲಭಿಸಿಲ್ಲ. ಜನಪ್ರತಿನಿಧಿಗಳು ವೋಟು ಕೇಳಲು ಮಾತ್ರ ಬರುತ್ತಾರೆ. ಮೂಲಸೌಕರ್ಯ ಒದಗಿಸಲು ಯಾರೂ ಮುಂದಾಗಿಲ್ಲ. ಸಮುದಾಯ ಭವನ ಹಾಗೂ ಉದ್ಯಾನ ನಿರ್ಮಿಸಲಾಗಿದ್ದು, ಅವುಗಳಿಗೆ ಉದ್ಘಾಟನೆ ಭಾಗ್ಯ ಇನ್ನೂ ಲಭಿಸಿಲ್ಲ’ ಎಂದು ನಿವಾಸಿಗಳಾದ ಭೀಮಪ್ಪ, ಅಲ್ಲಾಬಿ ತಹಶೀಲ್ದಾರ್‌ ಹೇಳಿದರು.

ಸ್ವಚ್ಛ ಭಾರತ ಅಭಿಯಾನದಡಿ ಕುಷ್ಠ ರೋಗ ಕಾಲೊನಿಯಲ್ಲಿರುವ ಎಲ್ಲ ಮನೆಗಳಿಗೆ ಶೀಘ್ರವೇ ಶೌಚಾಲಯ ನಿರ್ಮಿಸಿಕೊಡಲಾಗುವುದು
ಕಮಲಾ ಹಾದಿಮನಿ,21 ವಾರ್ಡ್‌ನ ಸದಸ್ಯೆ

ಹುಚ್ಚೇಶ್ವರ ಅಣ್ಣಿಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.