ADVERTISEMENT

ಮೊರಾರ್ಜಿ ಶಾಲೆಯಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ..!

ಎರಡು, ಮೂರು ದಿನಕ್ಕೊಮ್ಮೆ ಸ್ನಾನ; ವರ್ಷದಿಂದ ಮಕ್ಕಳಿಗೆ ತಪ್ಪದ ಗೋಳು

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 10:20 IST
Last Updated 18 ಜೂನ್ 2019, 10:20 IST
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿರುವ ಮೂರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿರುವ ಮೂರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ   

ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಶಾಲೆಯ ಮಕ್ಕಳು ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ತೊಳೆಯಲು ನೀರಿಲ್ಲದೆ ಪರದಾಡುತ್ತಿದ್ದಾರೆ.

ಮಳೆಕೊರತೆಯಿಂದ ಶಾಲೆಯ ಆವರಣದಲ್ಲಿದ್ದ ಕೊಳವೆಬಾವಿ ಬತ್ತಿ ಹೋಗಿದ್ದು, ಕಳೆದೊಂದು ವರ್ಷದಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಆ ನೀರು ಶಾಲಾ ಮಕ್ಕಳಿಗೆ ಸಾಲುತ್ತಿಲ್ಲ. ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 239 ವಿದ್ಯಾರ್ಥಿಗಳಿದ್ದಾರೆ. ಸುಸಜ್ಜಿತ ಶಾಲಾ ಕಟ್ಟಡ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ವ್ಯವಸ್ಥೆ ಇದೆ. ಆದರೆ, ಶಾಲೆಯಲ್ಲಿ ನೀರಿಲ್ಲದಿರುವುದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರನ್ನು ಚಿಂತೆಗೀಡು ಮಾಡಿದೆ.

ನೀರಿನ ಕೊರತೆ ಇರುವುದರಿಂದ ವಿದ್ಯಾರ್ಥಿಗಳು 2 ರಿಂದ 3 ದಿನಗಳಿಗೊಮ್ಮೆ ಸ್ನಾನ ಮಾಡುವಂತಹ ಶೋಚನೀಯ ಸ್ಥಿತಿ ಇದೆ. ಶೌಚಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಈ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ತಮ್ಮ ಪಾಲಕರ ಗಮನಕ್ಕೂ ತಂದಿದ್ದಾರೆ. ಅಲ್ಲದೇ ಕೆಲವು ವಿದ್ಯಾರ್ಥಿಗಳು ಕುಡಿಯಲು ಟ್ಯಾಂಕರ್‌ ನೀರನ್ನೇ ಬಳಸುತ್ತಿದ್ದಾರೆ. ಸ್ನಾನ ಮಾಡಲು ಹೊರಗಿನಿಂದ ಬಕೆಟ್‌ಗಳಲ್ಲಿ ನೀರನ್ನು ತುಂಬಿಕೊಂಡು ವಸತಿ ನಿಲಯಕ್ಕೆ ತೆಗೆದುಕೊಂಡು ಹೋಗುತ್ತಾರೆ.

ADVERTISEMENT

ನೀರು ತರುವಾಗ ತೇಜಸ್ವಿನಿ ತೊಂಡಿಹಾಳ ಎಂಬ 6ನೇ ತರಗತಿ ವಿದ್ಯಾರ್ಥಿನಿಯ ಕೈ ಊದಿಕೊಂಡಿದ್ದು, ಆಕೆಯನ್ನು ಪಾಲಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ‘ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಇಲ್ಲಿನ ಶಿಕ್ಷಕರೂ ಅಸಹಾಯಕರಾಗಿದ್ದಾರೆ. ಜಿಲ್ಲಾಡಳಿತವೇ ನಮ್ಮ ನೆರವಿಗೆ ಬರಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.