ನರಗುಂದ: ತಾಲ್ಲೂಕಿನ ಬನಹಟ್ಟಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಮೂರು ದಿನಗಳಿಂದ ತೀವ್ರ ಪರದಾಡುವಂತಾಗಿದೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ನರಗುಂದ ಪಟ್ಟಣಕ್ಕೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘24/7 ಡಿಬಿಒಟಿ ನೀರಿನ ಪೂರೈಕೆ ಇದ್ದರೂ ಮೂರು ದಿನಗಳಿಂದ ನೀರು ಸ್ಥಗಿತಗೊಂಡಿದೆ. ಇದರಿಂದ ಜನರು ಬಳಸಲು, ಕುಡಿಯಲು ನೀರು ಎಲ್ಲಿಂದ ತರಬೇಕು?’ ಎಂದು ಸ್ಥಳೀಯ ಆಡಳಿತದ ವಿರುದ್ಧ ಬನಹಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲದ ಪರ್ಯಾಯ ವ್ಯವಸ್ಥೆ: ಬನಹಟ್ಟಿಯಲ್ಲಿ ಪ್ರಸ್ತುತ ಡಿಬಿಒಟಿಯೇ ಆಧಾರ. ಅದು ಬಂದ್ ಆದರೆ ಜನರಿಗೆ ನೀರಿಲ್ಲ. ಕುಡಿಯುವ ನೀರಿನ ಕೆರೆ ಇದ್ದರೂ ಇಲ್ಲದಂತಾಗಿದೆ. ಡಿಬಿಒಟಿ ಬಂದ ಮೇಲಂತೂ ಕೆರೆಗಳು ಹಾಳಾಗಿ ಹೋಗಿವೆ. ಅದರಲ್ಲಿ ಈಗ ಅಲ್ಪ ಪ್ರಮಾಣದ ನೀರು ಇದ್ದರೂ ಬಳಸಲು ಯೋಗ್ಯವಿಲ್ಲದಂತಾಗಿದೆ. ಊರ ಹಳ್ಳದ ಬಳಿ ಕೊಳವೆಬಾವಿ ನೀರು ಬಳಸಲಿಕ್ಕೆ ಉಪಯೋಗಿಸಲಾಗುತ್ತಿತ್ತು. ಅದು ಈಗ ಅಷ್ಟಕ್ಕಷ್ಟೇ. ಇದರಿಂದ ಬನಹಟ್ಟಿ ಹಾಗೂ ಮೂಗನೂರ ಗ್ರಾಮದ ನಾಗರಿಕರು ಕುಡಿಯುವ ನೀರಿಗಾಗಿ ಹಾಗೂ ಬಳಸುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಎರಡು ವಾರಕ್ಕೊಮ್ಮೆ ನೀರು: ‘ಡಿಬಿಒಟಿ ಇದ್ದರೂ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಒಂದು ವಾರದಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಈಚೆಗಂತೂ ಎರಡು ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ನೀರಿನ ಸಂಗ್ರಹ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಯದಾಗಿದೆ’ ಎಂದು ಗ್ರಾಮಸ್ಥರು ಅಲವತ್ತುಕೊಂಡರು.
ಬನಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಂತೆ ಮೂಗನೂರ ಗ್ರಾಮದ ಜನರು ಸಹ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಇಲ್ಲೂ ಕೂಡ ಪರ್ಯಾಯ ವ್ಯವಸ್ಥೆ ಇಲ್ಲ.
ನಳಗಳಿಗೆ ಪೂರೈಕೆಯಾಗದ ನೀರು: ಕೊಳವೆಬಾವಿ ನೀರು ಕೆರೆ ಪಕ್ಕದಲ್ಲೇ ಇದೆ. ಆದರೆ ಅದು ಉಪ್ಪು ನೀರಾಗಿದೆ. ಜೊತೆಗೆ ಆ ನೀರನ್ನು ನಳಗಳಿಗೆ ಪೂರೈಕೆಯಾಗುವುದಿಲ್ಲ.ಕಳೆದ ಎರಡು ದಿನಗಳಿಂದ ಎರಡು ಕಿ.ಮೀ. ದೂರದಲ್ಲಿರುವ ಕೊಳವೆಬಾವಿ ನೀರನ್ನು ಹೊತ್ತು ತರಬೇಕಿದೆ. ಕುಡಿಯುವ ನೀರಿಗೆ 15 ಕಿ.ಮೀ. ದೂರದ ನರಗುಂದಕ್ಕೆ ತೆರಳಬೇಕಿದೆ. ಆದ್ದರಿಂದ ಕೂಡಲೇ ಡಿಬಿಒಟಿ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೆರೆ ನೀರು ಸಂರಕ್ಷಿಸುವಲ್ಲಿ ಸಾರ್ವಜನಿಕರು ನಾಗರಿಕ ಪ್ರಜ್ಞೆ ತೋರಬೇಕು. ಡಿಬಿಒಟಿ ನೀರು ಇಲ್ಲದಾಗ ಪರ್ಯಾಯ ವ್ಯವಸ್ಥೆ ಬೇಕಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಶೀಘ್ರ ಕ್ರಮ ತೆಗೆದುಕೊಳ್ಳಲಿದೆ–ಶಿವರಾಜ ಕಲ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯರು ನರಗುಂದ
ವಿದ್ಯುತ್ ಸಮಸ್ಯೆಯಿಂದ ಡಿಬಿಒಟಿ ನೀರು ಪೂರೈಕೆಯಾಗಿಲ್ಲ. ಈಗಾಗಲೇ ದುರಸ್ತಿ ಕಾರ್ಯ ನಡೆದಿದೆ. ಸೋಮವಾರದಿಂದ ನೀರು ಪೂರೈಕೆ ಮಾಡಲಾಗುವುದು–ಎನ್.ಎಂ.ಪೂಜಾರ ಪಿಡಿಒ ಬನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.