ಶಿರಹಟ್ಟಿ: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆ ಮೀರಿ ಅಂದರೆ 17,140 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು, ಈಗ ತೇವಾಂಶ ಕೊರತೆ ಮತ್ತು ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದರು. ಈಗ ಹೂವರಳಿ, ಕಾಯಿ ಕಟ್ಟುವ ಹಂತಕ್ಕೆ ಬಂದಿದ್ದು, ತೇವಾಂಶದ ಕೊರತೆ ಎದುರಾಗಿದೆ. ಸದ್ಯ ಮಳೆ ಲಭಿಸಿದರೆ ಹೆಸರು ಬೆಳೆ ಕೈ ಹಿಡಿಯುತ್ತದೆ. ಇಲ್ಲವಾದರೆ ಇಡೀ ಬೆಳೆ ನಾಶವಾಗುತ್ತದೆ. ಇದರ ಜತೆಗೆ ತಾಲ್ಲೂಕಿನ ಹಲವೆಡೆ ಹಳದಿ ರೋಗವೂ ಕಾಣಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೆಸರಿನ ಜತೆಗೆ, ಸೋಯಾಬೀನ್, ಶೇಂಗಾ, ಈರುಳ್ಳಿ ಸಹ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿರುವ ಶೇಂಗಾ ಈ ಸಮಯದಲ್ಲಿ ಕಾಳು ಕಟ್ಟುವ ಹಂತದಲ್ಲಿ ಇರಬೇಕಿತ್ತು. ಆದರೆ, ಮಳೆ ಕೊರತೆಯಿಂದ ಬೆಳೆ ಬಾಡತೊಡಗಿದೆ. ಕೆಲವೆಡೆ ಜಿಂಕೆ ಹಾವಳಿಯಿಂದ ಬೆಳೆ ಹಾಳಾಗಿದೆ.
‘ಮಳೆ ಇಲ್ಲ. ಜಿಂಕೆ ಹಾವಳಿ ಇದರಿಂದ ಹೊಲದತ್ತ ಹೆಜ್ಜೆ ಇಡಲು ಮನಸ್ಸು ಆಗುತ್ತಿಲ್ಲ’ ಎಂದು ರೈತರ ಬೇಸರ ವ್ಯಕ್ತಪಡಿಸಿದರು.
ಹಳದಿ ರೋಗ ನಿಯಂತ್ರಣಕ್ಕೆ
ಹೆಸರಿನ ಬೆಳೆಯ ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಗಿಡಗಳು ನೆಲಮಟ್ಟದಲ್ಲಿ ಇದ್ದರೆ ಹಾಗೂ ರೋಗ ತೀವ್ರವಾಗಿದ್ದರೆ ಕಾಯಿ ಬಿಡುವುದಿಲ್ಲ. ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭದಲ್ಲೇ ಕಿತ್ತು ಮಣ್ಣಿನಲ್ಲಿ ಹೂಳಬೇಕು ಎಂದು ಇಲ್ಲಿನ ಕೃಷಿ ಸಹಾಯಕ ಕಾರ್ಯಾಲಯದ ನಿರ್ದೇಶಕ ಎಫ್.ಎಸ್. ರಾಯನಗೌಡರ ಸಲಹೆ ನೀಡಿದರು.
ಅಂಕಿ ಅಂಶ
ಜಿಲ್ಲೆಯಾದ್ಯಂತ ಹೆಸರು ಬಿತ್ತನೆಯಾಗಿರುವುದು 75,537 ಹೆಕ್ಟೇರ್
ಶಿರಹಟ್ಟಿ ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವುದು 17,140 ಹೆಕ್ಟೇರ್
ತಾಲ್ಲೂಕಿನಲ್ಲಿ ವಿವಿಧ ಬೆಳೆಗಳ ಒಟ್ಟು ಬಿತ್ತನೆ ಗುರಿ 65,200 ಹೆಕ್ಟೇರ್
ಜೂನ್ ಅಂತ್ಯದವರೆಗಿನ ಬಿತ್ತನೆ ಪ್ರಗತಿ 46,739 ಹೆಕ್ಟೇರ್
ಜೂನ್‌ನ ವಾಡಿಕೆ ಮಳೆ 93 ಮಿ.ಮೀ, ಲಭಿಸಿದ್ದು 76 ಮಿ.ಮೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.