
ಗದಗ: ‘ರೋಣ ತಹಶೀಲ್ದಾರ್ ನಾಗರಾಜ ಕೆ. ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ಛಲವಾದಿ ಎಂಬ ಯುಟ್ಯೂಬ್ ಪತ್ರಕರ್ತನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
‘ನಾಗರಾಜ ಕೆ. ಅವರು ಜನವರಿ 25ರ ಮಧ್ಯರಾತ್ರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹನುಮಂತ ಛಲವಾದಿ ಮತ್ತು ಶರಣಪ್ಪ ವಿರುದ್ಧ ದೂರು ನೀಡಿದ್ದರು. ದೂರಿನ ಅನ್ವಯ ಯೂಟ್ಯೂಬ್ ಪತ್ರಕರ್ತನೆಂದು ಹೇಳಿಕೊಳ್ಳುತ್ತಿದ್ದ ಹನುಮಂತ ಛಲವಾದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯುಟ್ಯೂಬ್ ಪತ್ರಕರ್ತ ಹನುಮಂತ ಛಲವಾದಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದ. ಇಂಥದ್ದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ನಾಗರಾಜ್ ಕೆ. ಅವರು ಪ್ರಿವೆಂಟಿವ್ ಸೆಕ್ಷನ್ ಅಡಿ ಬಾಂಡ್ ಓವರ್ (ಮುಚ್ಚಳಿಕೆ) ಪಡೆದುಕೊಂಡಿದ್ದರು ಎಂದು ತಿಳಿಸಿದರು.
‘ಆ ಬಾಂಡ್ ಓವರ್ ಹಿಂಪಡೆಯುವಂತೆ ಒತ್ತಾಯಿಸಿ ಆತ ಜ.25ರ ಮಧ್ಯರಾತ್ರಿ ಅತಿಕ್ರಮವಾಗಿ ತಹಶೀಲ್ದಾರ್ ಮನೆಗೆ ನುಗ್ಗಿ, ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.