ADVERTISEMENT

ಅಂತರಂಗದ ಅರಿವಿನ ಬರ- ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST
ಅಂತರಂಗದ ಅರಿವಿನ ಬರ- ಸ್ವಾಮೀಜಿ ವಿಷಾದ
ಅಂತರಂಗದ ಅರಿವಿನ ಬರ- ಸ್ವಾಮೀಜಿ ವಿಷಾದ   

ಅರಸೀಕೆರೆ: `ಮಾನವ ಬಾಹ್ಯ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಆಶ್ರಯಿಸಿ ಯಶಸ್ವಿಯಾಗಿದ್ದಾನೆ. ಆದರೆ ಆಂತರ್ಯದ ಅಭಿವೃದ್ಧಿಗೆ ಎದುರಾದ ಬರ ನಿವಾರಿಸಿಕೊಳ್ಳಲು ಆತನಿಂದ ಸಾಧ್ಯವಾಗಿಲ್ಲ~ ಎಂದು ತಿಪಟೂರು ತಾಲ್ಲೂಕಿನ ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ಮಿನಿವಿಧಾನಸೌಧ ಹಿಂಭಾಗದಲ್ಲಿರುವ ವಿಘ್ನೇಶ್ವರಸ್ವಾಮಿ, ಕೆಂಗಲ್ ಬಸವೇಶ್ವರಸ್ವಾಮಿ ಹಾಗೂ ಶನೇಶ್ವರಸ್ವಾಮಿ ದೇವಾಲಯದಲ್ಲಿ  ಭಾನುವಾರ ನಡೆದ 13ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಜೀವನದಲ್ಲಿ ಸಾಮರಸ್ಯದ ಜತೆಗೆ ಮಾನವತ್ವ ಸ್ಥಾಪನೆಯಾಗಬೇಕು. ನಾವು ಬದುಕುತ್ತಿರುವ ಭೌಗೋಳಿಕ ಪ್ರದೇಶದ ಲಕ್ಷಣಗಳ ಅರಿವು ನಮಗಿರಬೇಕು. ಕ್ರಿಯಾಶೀಲತೆ, ಪ್ರತಿಭೆಗೆ ಎಂದಿಗೂ ಮುಪ್ಪು ಬಾರದಂತೆ ಎಚ್ಚರ ವಹಿಸಬೇಕು ಎಂದರು. 

 ಮನುಷ್ಯ ಮಾನವೀಯತೆ ಮರೆತಿದ್ದಾನೆ. ಜಗತ್ತಿನ ಎಲ್ಲ ರಾಷ್ಟ್ರಗಳು ವೈಜ್ಞಾನಿಕವಾಗಿ ಮುಂದುವರಿಯುತ್ತ ನೈತಿಕ ಮೌಲ್ಯಗಳನ್ನು ಕಡೆಗಣಿಸುತ್ತಿವೆ. ಇಂದಿನ ಅಶಾಂತಿ, ಒತ್ತಡದ ಬದುಕಿಗೆ ಶರಣರ ವಚನಗಳೇ ಸೂಕ್ತ ಪರಿಹಾರ ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಸ್‌ಎಸ್ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ಗುರುನಂಜಯ್ಯ ಮಾತನಾಡಿ, ಮನುಷ್ಯನಿಗೆ ನಮ್ಮತನದ ಅರಿವು ಮೂಡಿಸಬೇಕಿದೆ. ಮನಷ್ಯತ್ವದ ಗುಣಗಳು ಈ ನೆಲದ ಸಂಸ್ಕೃತಿಯಲ್ಲಿವೆ. ವಿದೇಶೀಯರು ಸಹ ಶಾಂತಿ, ನೆಮ್ಮದಿ ಅರಸಿ ಭಾರತಕ್ಕೆ ಬರುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಜೆ.ಎಚ್.ಸೋಮಶೇಖರ್, ವಕೀಲ ಬಿ.ಎನ್.ರವಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್ ಮಾತನಾಡಿದರು. ಪುರಸಭೆ ಸದಸ್ಯ ಜಿ.ಟಿ. ಗಣೇಶ್, ವರ್ತಕ ದಂದೂರ ರವಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.