ADVERTISEMENT

ಅರಸೀಕೆರೆ: 24ರಂದು ಸಾಹಿತ್ಯ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 6:12 IST
Last Updated 10 ಜೂನ್ 2013, 6:12 IST

ಅರಸೀಕೆರೆ: 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜೂ.24ರಂದು ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ ರಾಮಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಸಿದ್ಧತಾ ಸಭೆ ನಡೆಯಿತು.
ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯರು ಹಾಗೂ ಹೊರಗಿನವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶ ಹಾಗೂ ನಾಡು-ನುಡಿ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ರಾಮಸ್ವಾಮಿ ಅವರ ಆಯ್ಕೆ ಸೂಕ್ತ ಎಂದು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಮ್ಮೇಳನ ನಡೆಯುವ ಮುಖ್ಯ ವೇದಿಕೆಗೆ `ಉಮಾದೇವಿ ವೇದಿಕೆ' ಎಂದು ನಾಮಕರಣ ಮಾಡಲಾಗು ತ್ತದೆ. ಬೆಳಿಗ್ಗೆ 8ಗಂಟೆಗೆ ತಹಶೀಲ್ದಾರ್ ಕೇಶವಮೂರ್ತಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ರಾಮಸ್ವಾಮಿ ಕನ್ನಡ ಧ್ವಜಾರೋಹಣ ಮಾಡುವರು. ಪಟ್ಟಣದ ಗಣಪತಿ ದೇಗುಲದಿಂದ ಸಮ್ಮೇಳನ ಸಭಾಂಗಣದವರೆಗೆ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಅಧ್ಯಕ್ಷರನ್ನು ಮುಖ್ಯ ವೇದಿಕೆಗೆ ಕರೆತರಲಾಗುತ್ತದೆ ಎಂದರು.

ತಹಶೀಲ್ದಾರ್ ಕೇಶವಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೇಲೇಗೌಡ, ಕಾರ್ಯದರ್ಶಿ ಸಿ.ಬಿ. ಕುಮಾರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಚಂದ್ರಶೇಖರ್, ತಾಲ್ಲೂಕು ಕರವೇ ಅಧ್ಯಕ್ಷ ಹೇಮಂತ್‌ಕುಮಾರ್, ಬಾಣಾವರ ರಾಜಸ್ವ ನಿರೀಕ್ಷಕ ನಾಗರಾಜ್ ಇದ್ದರು.

ಅಧ್ಯಕ್ಷರಿಗೆ ಆಹ್ವಾನ
5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ರಾಮಸ್ವಾಮಿ ಅವರ ನಿವಾಸಕ್ಕೆ ತಾಲ್ಲೂಕು ಕಸಾಪ ಪದಾಧಿಕಾರಿಗಳು ಭಾನುವಾರ ತೆರಳಿಆಹ್ವಾನ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೇಲೇಗೌಡ, ಕಾರ್ಯದರ್ಶಿ ಸಿ.ಬಿ. ಕುಮಾರ್, ಖಜಾಂಚಿ ಬಸಪ್ಪ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಪರಮೇಶ್, ಸದಸ್ಯ ಶಿವಮೂರ್ತಿ, ಶಿಕ್ಷಕರಾದ ಗೋವಿಂದಸ್ವಾಮಿ, ಸೋಮಶೇಖರ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎನ್.ಜಿ. ಮಧು ಅವರ ತಂಡ ರಾಮಸ್ವಾಮಿ ಮನೆಗೆ ತೆರಳಿ ಅವರಿಗೆ ಮೈಸೂರು ಪೇಟ ತೊಡಿಸಿ ಅಭಿನಂದಿಸಿ, ಆಹ್ವಾನ ನೀಡಿತು.

`ಸಮ್ಮೇಳನಗಳು ಉತ್ಸವದಲ್ಲಿಯೇ ಮುಗಿಯಬಾರದು. ನಾಡು-ನುಡಿ ಕುರಿತ ಅರ್ಥಪೂರ್ಣ ವಿಚಾರ ಸಂಕಿರಣ ನಡೆಯಬೇಕು. ಪ್ರಚಾರಕ್ಕಾಗಿ ಸಮ್ಮೇಳನ ನಡೆಯುವುದು ತರವಲ್ಲ' ಎಂದು ರಾಮಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.