ADVERTISEMENT

ಅಸ್ತಿತ್ವ ಉಳಿಸಿಕೊಳ್ಳಲು ಬರೆಯಿರಿ: ಬಾನು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 6:20 IST
Last Updated 26 ಫೆಬ್ರುವರಿ 2012, 6:20 IST

ಹಾಸನ: `ಸಾಹಿತ್ಯ ಪ್ರಪಂಚದಲ್ಲಿ ಈವರೆಗೆ ಪುರುಷ ಪ್ರಧಾನ ಸಂವೇದನೆಗಳೇ ದಾಖಲಾಗುತ್ತ ಬಂದಿವೆ. ಮಹಿಳೆ ತನ್ನ ದನಿಯನ್ನು ಗಟ್ಟಿಗೊಳಿಸದಿದ್ದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಆಕೆಗೆ ತನ್ನದೇ ಆದ ಅಸ್ತಿತ್ವ   ಇರುವು    ದಿಲ್ಲ. ಈ ಕಾರಣದಿಂದ ಮಹಳೆ ಬರೆಯಲೇ ಬೇಕಾಗಿದೆ~ ಎಂದು ಲೇಖಕಿ ಬಾನು ಮುಷ್ತಾಕ್ ನುಡಿದರು.

ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಹಾಸನದ ಪ್ರೇರಣಾ ವಿಕಾಸ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಮಹಿಳೆ - ನಾನೇಕ ಬರೆಯಲೇಬೇಕು ?~ ವಿಷಯ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಕಾಲೇಜಿನ ಬರಹಕಾರರ ಕೂಟ ಉದ್ಘಾಟಿಸಿ ಮಾತನಾಡಿದರು.

`ಮಹಿಳೆಯರು ಬರೆಯುವುದಕ್ಕೂ  ಮುನ್ನ ಕೆಲವು ಸೂಕ್ಷ್ಮತೆ ಅರಿತುಕೊಳ್ಳಬೇಕಾಗಿದೆ. ನಮ್ಮ ಹೋರಾಟ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧವೇ ವಿನಾ ಪುರುಷರ ವಿರುದ್ಧ ಅಲ್ಲ. ಇದು ಅಭಿವ್ಯಕ್ತಿಯ ಸೂಕ್ಷ್ಮತೆ. ಮಹಿಳೆ ಮೌನವಾಗಿ, ತಲೆ ತಗ್ಗಿಸಿ ಇರಬೇಕು ಎಂದು ಸಮಾಜ ನಿರೀಕ್ಷಿಸುತ್ತದೆ. ಹಿಂದಿನ ಅನೇಕ ಜನಪದ ಮಹಿಳೆಯರು ತಮ್ಮ ತಲ್ಲಣಗಳನ್ನು ಘನೀಕರಿಸಿ ಬಿಂಬಗಳನ್ನಾಗಿಟ್ಟಿದ್ದಾರೆ. ಈ ಬಿಂಬಗಳೇ ಇಂದಿನ ಲೇಖಕಿಯರಿಗೆ ಅಗಾಧ ಸಂಪತ್ತಾಗಬ ಲ್ಲದು ಎಂದರು.

`ನಮ್ಮ ಕಾಲದ ಮಹಿಳೆಯರು ಬರವಣಿಗೆ ಆರಂಭಿಸಿದಾಗಿನ ಪರಿಸ್ಥಿತಿ ಈಗ ಇಲ್ಲ. ನಾವು ಪುರುಷರನ್ನು ವಿರೋಧಿಸಿಲ್ಲ ಬದಲಿಗೆ ಬರವಣಿಗೆಯ ಮೂಲಕ ಪುರುಷ ಪ್ರಧಾನ  ಮೌಲ್ಯಗಳನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದ್ದೆವು. ನಾಲ್ಕು ಗೋಡೆಯಾಚೆಗಿನ ಬದುಕು ನಮಗೂ ಇದೆ, ಅದನ್ನು ಕೊಡಿ ಎಂದು ಕೇಳಿದೆವು.

ಸಮಾನತೆಯೇ ನಮ್ಮ ಬರಹದ ವಸ್ತುವಾಗಿತ್ತು. ಪರಿಣಾಮವಾಗಿ ಚಾರಿತ್ರಿಕ, ಧಾರ್ಮಿಕ, ರಾಜಕೀಯ ನಿರ್ಬಂಧಗಳನ್ನು ನಮ್ಮ ಕಾಲದ ಲೇಖಕಿಯರು ಎದುರಿಸಬೇಕಾಯಿತು. ಈಗ ಅಂಥ ಸ್ಥಿತಿ ಇಲ್ಲ. ಆದರೆ ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲೇಬೇಕಾಗಿದೆ. ಅದಕ್ಕಾಗಿ ಮಹಿಳೆ ಬರೆಯಲೇಬೇಕು~ ಎಂದು ಬಾನು ಮುಷ್ತಾಕ್ ಪ್ರತಿಪಾದಿಸಿದರು.

`ಬರವಣಿಗೆ ಸುಲಭ    ವಲ್ಲ, ಯಾತನಾಮಯ ಪ್ರಕ್ರಿಯೆ. ಪ್ರತಿದಿನ ಇದಕ್ಕಾಗಿಯೇ ಒಂದಿಷ್ಟು ಹೊತ್ತು ಮೀಸಲಿಟ್ಟಾಗ ಮಾತ್ರ ಅದು ಸಾಧ್ಯವಾಗುತ್ತದೆ~ ಎಂದರು.

ಪ್ರಾಸ್ತಾವಿಕ ಮಾತನಾಡಿದ ಲೇಖಕಿ ರೂಪ ಹಾಸನ, `ಮಹಿಳೆಯರ ಸಾಹಿತ್ಯವನ್ನು ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವುದು, ಅವಗಣಿಸುವುದು ಇಂದಿಗೂ ನಡೆದಿದೆ. ಹೀಗಿದ್ದರೂ ನಮ್ಮ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ನಾವು ಬರೆಯಲೇಬೇಕು~ ಎಂದರು.

`ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಆತ್ಮಚರಿತ್ರೆ ಬರೆದಿರುವುದು ಕಡಿಮೆ. ಇತ್ತೀಚಿನ ಕೆಲವು ದಶಕಗಳಲ್ಲಿ ಅಂಥ ಪ್ರಯತ್ನಗಳು ನಡೆದಿದ್ದರೂ, ಸಮಾಜ ಮಹಿಳೆಯರ ಕೃತಿಗಳನ್ನು ಅಷ್ಟೊಂದು ಗಂಭೀರವಾಗಿ ಪರಿ             ಗಣಿಸಿಲ್ಲ. ~ ಎಂದರು.

ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕಿ ಸುಲೋಚನಾ ವೇದಿಕೆ  ಯಲ್ಲಿದ್ದರು.

ವಿದ್ಯಾರ್ಥಿನಿ ಗೀತಾಂಜಲಿ ಭಾವಗೀತೆ ಹಾಡಿದರು. ಪ್ರೊ. ಕವಿತಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮೂರು ಗೋಷ್ಠಿಗಳನ್ನು ಆಯೋಜಿಸಲಾಯಿತು. ರೂಪ ಹಾಸನ, ಹಾಗೂ ಸಾಹಿತಿ ಜಾನಕಿ ಸುಂದರೇಶ್ ಗೋಷ್ಠಿ ನಡೆಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.