ADVERTISEMENT

ಆರೋಗ್ಯ ರಕ್ಷಣೆಗೆ ಕ್ರೀಡೆ ಸಹಕಾರಿ: ತಳವಾರ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯ ಮಟ್ಟದ 2011-12ನೇ ಸಾಲಿನ ಅಂತರ ಕಾಲೇಜು, ಅಂತರ ವಲಯ ಪುರುಷರ ಕ್ರೀಡಾಕೂಟಕ್ಕೆ ಗುರುವಾರ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ವಿ.ಜಿ. ತಳವಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, `ಕ್ರೀಡಾಕೂಟ ಆರೋಗ್ಯ ರಕ್ಷಣೆಗೆ ಸಹಕಾರಿ. ಜತೆಗೆ ಯುವಕರಲ್ಲಿ ಶಿಸ್ತು ಮೂಡಿಸುತ್ತದೆ. ಈ ಕ್ರೀಡಾಕೂಟದ ಮೂಲಕ ಮೈಸೂರು ವಿವಿ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭೆ ಅನಾವರಣ ಮಾಡಬೇಕು~ ಎಂದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ಕೃಷ್ಣ ಮಾತನಾಡಿ, `ಕ್ರೀಡಾಕೂಟದಲ್ಲಿ 36 ಕಾಲೇಜುಗಳ 1500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. 14  ಕ್ರೀಡೆಗಳಲ್ಲಿ ಸ್ಪರ್ಧಿಗಳು ಸೆಣಸಲಿದ್ದಾರೆ~ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, `ಶಿಕ್ಷಣ ಮತ್ತು ಕ್ರೀಡೆ ಒಟ್ಟಿಗೆ ಸಾಗಬೇಕು. ಆದರೆ ಈಚಿನ ದಿನಗಳಲ್ಲಿ ಮಕ್ಕಳು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದಿರುವುದು ಬೇಸರದ ವಿಚಾರ. ವಿಶ್ವದ ಪುಟ್ಟ ರಾಷ್ಟ್ರಗಳು ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿವೆ. ಭಾರತದ ಸಾಧನೆ ಮಾತ್ರ ಸ್ವಲ್ಪ ನಿರಾಸೆ ಮೂಡಿಸುತ್ತದೆ. ವಿದ್ಯಾರ್ಥಿಗಳು ಜಾಗತಿಕ ಮಟ್ಟಕ್ಕೆ ಏರುವ ಗುರಿ ಇಟ್ಟುಕೊಂಡು ಮುನ್ನಡೆಯಬೇಕು~ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ `ಸದೃಢ~ ಕ್ರೀಡಾ ಸಂಚಿಕೆ ಬಿಡುಗಡೆ ಮಾಡಲಾಯಿತು. ಸರ್ಕಾರಿ ಕಲಾ ಕಾಲೇಜಿನ ವಾರ್ತಾ ಪತ್ರಿಕೆ `ಚಿಂತನ~ವನ್ನು ಮೈಸೂರು ವಿ.ವಿ. ಪರೀಕ್ಷಾಂಗ ಕುಲಸಚಿವ ರಾಮು ಬಿಡುಗಡೆಗೊಳಿಸಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ವಿ. ಲಕ್ಷ್ಮಿನಾರಾಯಣ, ಟಿ.ಆರ್. ಮಹೇಂದ್ರ ಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.