ADVERTISEMENT

ಇತಿಹಾಸದ ಪುಟ ಸೇರಿದ ಹಳೇ ಬಸ್ ನಿಲ್ದಾಣ

ಉದಯ ಯು.
Published 8 ಏಪ್ರಿಲ್ 2013, 4:53 IST
Last Updated 8 ಏಪ್ರಿಲ್ 2013, 4:53 IST
ಹಾಸನದ ಹಳೆಯ ಬಸ್ ನಿಲ್ದಾಣ ನೆಲಸಮ ಕಾರ್ಯ ಆರಂಭವಾಗಿರುವುದು.
ಹಾಸನದ ಹಳೆಯ ಬಸ್ ನಿಲ್ದಾಣ ನೆಲಸಮ ಕಾರ್ಯ ಆರಂಭವಾಗಿರುವುದು.   

ಹಾಸನ: ನಗರದ ನಾಲ್ಕು ದಶಕಗಳ ಕಟ್ಟಡಕ್ಕೆ ತೆರೆ ಎಳೆಯಲು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿದ್ಧವಾಗಿದೆ. ಇನ್ನು ಕೆಲವು ದಿನಗಳಲ್ಲಿ ಹಾಸನದ ಹಳೆಯ ಬಸ್ ನಿಲ್ದಾಣ ಇತಿಹಾಸದ ಪುಟ ಸೇರಲಿದೆ.

1972ರಲ್ಲಿ ಉದ್ಘಾಟನೆಯಾದ ಹಳೆಯ ಬಸ್ ನಿಲ್ದಾಣ ವನ್ನು ನೆಲಸಮ ಕೆಲಸ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಿತ್ತು. ಏ.1ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಮಕ್ಕಳಿಗೆ ತೊಂದರೆಯಾಗ ಬಾರದೆಂಬ ಕಾರಣಕ್ಕೆ ಸಂಸ್ಥೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಪರೀಕ್ಷೆ ಮುಗಿದು ಒಂದು ವಾರದೊಳಗೆ, ಒಂದು ಕಾಲದಲ್ಲಿ ಜನರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣದ ಜಾಗ ಬಟಾಬಯಲಾಗಲಿದೆ. ಈ ಜಾಗದಲ್ಲಿ ಒಂದು ಗ್ರಾಮಾಂತರ ಬಸ್ ನಿಲ್ದಾಣ, ಪಾರ್ಕಿಂಗ್ ವ್ಯವಸ್ಥೆ ಜತೆಗೆ ಮೇಲೆ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆಯನ್ನು ಸಾರಿಗೆ ಸಂಸ್ಥೆ ಸಿದ್ಧಪಡಿಸಿದೆ.

ಬಸ್ ನಿಲ್ದಾಣ ಸ್ಥಳಾಂತರಗೊಂಡು ಎರಡು ವರ್ಷಗಳಾ ಗುತ್ತ ಬಂದಿವೆ. ಹಳೆಯ ಬಸ್ ನಿಲ್ದಾಣ ಆರಂಭವಾ ದಾಗಿನಿಂದ ಇಲ್ಲಿ ವ್ಯಾಪಾರ ವಹಿವಾಟು ಆರಂಭಿಸಿ ಬದುಕು ಕಟ್ಟಿಕೊಂಡ ಅನೇಕ ಮಂದಿ ಈಗಾಗಲೇ ನೆಲೆ ಕಳೆದು ಕೊಂಡಿದ್ದಾರೆ. ಚಹಾ, ಬಾಳೆಹಣ್ಣು, ಹೂವು ಮತ್ತಿತರ ವಸ್ತು ಗಳನ್ನು ಮಾರುತ್ತಿದ್ದವರು, ಮಳೆಯಿರಲಿ- ಚಳಿಯಿರಲಿ ನಸುಕಿನಲ್ಲೇ ಬಂದು ಪೇಪರ್ ಬಂಡಲ್‌ಗಳನ್ನು ಎತ್ತಿಕೊಂಡು ಸೂರ್ಯ ಹುಟ್ಟುವುದಕ್ಕೂ ಮೊದಲೇ ಮನೆಮನೆಗೆ ತಲುಪಿಸು ತ್ತಿದ್ದವರು.

ಹೀಗೆ ಎಲ್ಲರೂ ಈ ಬಸ್ ನಿಲ್ದಾಣದ ಸಂಬಂಧ ಕಳೆದುಕೊಂಡು ಎರಡು ವರ್ಷಗಳಾಗಿವೆ. ಕೆಲವರು ಬೇರೆ ಎಲ್ಲೋ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಅನೇಕರು ಕೈಚೆಲ್ಲಿ ಕುಳಿತಿದ್ದಾರೆ. ಹೊಸ ಬಸ್ ನಿಲ್ದಾಣದಲ್ಲಿ ಇಂಥವರಿಗೆ ಅವಕಾಶ ಸಿಕ್ಕಿಲ್ಲ. ಹಳೆಯ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ಆದಾಗ ಇವರಿಗೆ ಅವಕಾಶ ಲಭಿಸುವುದೇ ಎಂಬುದೂ ಪ್ರಶ್ನೆಯಾಗಿದೆ.

ಮುಂದುವರಿದ ವಿರೋಧ: ಹಳೆಯ ಬಸ್ ನಿಲ್ದಾಣ ಕೆಡವಿ ಅಲ್ಲಿ ಕಾಂಪ್ಲೆಕ್ಸ್ ನಿರ್ಮಿಸುವುದನ್ನು ಸ್ಥಳೀಯ ಮುಖಂಡರು ವಿರೋಧಿಸುತ್ತ ಬಂದಿದ್ದಾರೆ. ವಿರೋಧ ಈಗಲೂ ಮುಂದುವರಿ ದಿದೆ. `ನಾಲ್ಕು ದಶಕಗಳ ಹಿಂದೆ ಬಸ್ ನಿಲ್ದಾಣಕ್ಕಾಗಿ ನಗರ ಸಭೆಯಿಂದ ಉಚಿತವಾಗಿ ಈ ಜಾಗ ನೀಡಲಾಗಿತ್ತು. ಅದನ್ನು ಬೇರೆ ಉದ್ದೇಶಕ್ಕೆ ಬಳಸಬಾರದು. ಬಸ್ ನಿಲ್ದಾಣ ಸ್ಥಳಾಂತರ ವಾಗಿರುವುದರಿಂದ ಅದನ್ನು ನಗರಸಭೆಗೆ ನೀಡಬೇಕು' ಎಂದು ಶಾಸಕರಾದಿಯಾಗಿ ಎಲ್ಲರೂ ವಾದಿಸಿದ್ದಾರೆ.

ನಗರಸಭೆಗೆ ಈ ಜಾಗ ಕೊಟ್ಟರೆ ಅವರಾದರೂ ಏನು ಮಾಡುತ್ತಾರೆ?. ನಗರದ ವಿವಿಧೆಡೆ ನಿರ್ಮಿಸಿ ಬಾಡಿಗೆಗೆ ನೀಡಿರುವ ಮಳಿಗೆಗಳಿಂದ ಸರಿಯಾಗಿ ಬಾಡಿಗೆ ಪಡೆಯಲು ನಗರಸಭೆಗೆ ಸಾಧ್ಯವಾಗುತ್ತಿಲ್ಲ. ನಗರದ ವಿವಿಧ ಭಾಗಗಳಲ್ಲಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವು ಮಾಡಿಸಲೂ ನಗರಸಭೆಗೆ ಸಾಧ್ಯವಾಗದಿರುವಾಗ ಈ ಜಾಗವೂ ಪರರ ಪಾಲಾಗುವುದಿಲ್ಲ ಎನ್ನುವುದಾದರೂ ಹೇಗೆ ? ಎಂಬುದು ನಾಗರಿಕರ ಪ್ರಶ್ನೆ.

`ಕೆಎಸ್‌ಆರ್‌ಟಿಸಿ ಜನರ ಸೇವೆಗೆ ಇರುವ ಸಂಸ್ಥೆ. ಹಣ ಸಂಪಾದನೆ ಅದರ ಗುರಿಯಾಗಬಾರದು. ಕಾಂಪ್ಲೆಕ್ಸ್ ನಿರ್ಮಿ ಸಲು ಬೇರೆ ಸಂಸ್ಥೆಗಳಿವೆ. ಆದ್ದರಿಂದ ಹಳೆಯ ಬಸ್ ನಿಲ್ದಾಣದ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಬೇಕು. ಜಾಗ ನಮಗೆ ಹಸ್ತಾಂತರಿಸಿ ಎನ್ನುವ ನಗರಸಭೆಯವರು ಈ ಜಾಗ ಬಳಕೆಗೆ ಯಾವುದೇ ಯೋಜನೆ ರೂಪಿಸಿಲ್ಲ. ಆದ್ದರಿಂದ ಅವರ ಬೇಡಿಕೆ ಯಲ್ಲೂ ಅರ್ಥವಿಲ್ಲ. ಬಸ್ ನಿಲ್ದಾಣಕ್ಕೆ ಬೇಕಾದಷ್ಟು ಜಾಗವನ್ನು ಬಳಸಿಕೊಂಡು ಉಳಿದ ಜಾಗವನ್ನು ಸುರಕ್ಷಿತವಾಗಿ ಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು' ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಹರಿಗೋಪಾಲ್.


`ಒತ್ತಡಕ್ಕೆ ಮಣಿಯುವುದಿಲ್ಲ'
`ಈ ಬಾರಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಬಸ್ ನಿಲ್ದಾಣ ಕೆಡವಿ ಅಲ್ಲಿ ಹೊಸ ಕಾಂಪ್ಲೆಕ್ಸ್ ನಿರ್ಮಿಸುವುದು ಖಚಿತ. ಈ ಜಾಗದಲ್ಲಿ ಈಗಾಗಲೇ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ್ದೇವೆ. ಅದನ್ನು ಇನ್ನೂ ವಿಸ್ತರಣೆ ಮಾಡುತ್ತೇವೆ. ಇದೇ ಜಾಗದಲ್ಲಿ ತಾತ್ಕಾಲಿಕವಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡುತ್ತೇವೆ.

ಹೊಸ ಕಾಂಪ್ಲೆಕ್ಸ್‌ನಲ್ಲಿ ನೆಲಮಹಡಿಯಲ್ಲಿ ಪಾರ್ಕಿಂಗ್, ಮೊದಲ ಮಹಡಿಯಲ್ಲಿ ಬಸ್ ನಿಲ್ದಾಣ ಹಾಗೂ ಮೇಲಿನ ಮಹಡಿಗಳಲ್ಲಿ ವ್ಯಾಪಾರ ಮಳಿಗೆಗಳಿರುತ್ತವೆ. ಜಾಗವನ್ನು ನಗರಸಭೆಗೆ ನೀಡುವ ಪ್ರಶ್ನೆ ಇಲ್ಲ. ಈ ವಿಚಾರ ಈಗಾಗಲೇ ಇತ್ಯರ್ಥವಾಗಿದೆ'

-ವಸಂತ ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.