ADVERTISEMENT

ಎಂಇಎಸ್‌ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:43 IST
Last Updated 19 ಡಿಸೆಂಬರ್ 2013, 5:43 IST

ಆಲೂರು: ಬೆಳಗಾವಿ ಸುವರ್ಣ ಸೌಧದ ಅಧಿವೇಶನದಲ್ಲಿ ಕನ್ನಡದ ಬಗ್ಗೆ ಅವಹೇಳನವಾಗಿ ಮಾತನಾಡಿದ ಎಂ.ಇ.ಎಸ್. ಶಾಸಕ ಸಂಬಾಜಿ ಪಾಟೀಲ ಅವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಚ್. ಗುಲಾಂ ಸತ್ತಾರ್ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಎನ್.ಕೆ. ಶಾರದಾಂಬ ಅವರಿಗೆ ಮನವಿ ಪತ್ರ ನೀಡಲಾಯಿತು.

ಕನ್ನಡ ನಾಡ ನುಡಿ ಹಾಗೂ ಭಾಷೆಗೆ ಅಡ್ಡಿ ಹಾಗೂ ಆತಂಕ ಉಂಟು ಮಾಡುತ್ತಿರುವ ಕ್ರಿಯೆಗಳು ಆಗಾಗ ನಡೆಯುತ್ತಿದೆ. ಶಾಸಕ ಸಂಬಾಜಿ ಪಾಟೀಲ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಉಮೇಶ್ ಕತ್ತಿ ಅಧಿವೇಶನದ ವೇಳೆ ಪ್ರತ್ಯೇಕ ರಾಜ್ಯದ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡುವುದರ ಮೂಲಕ ರಾಜ್ಯದ ಜನರ ಶಾಂತಿ ಸಹಬಾಳ್ವೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.

ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಹನುಮಂತೇಗೌಡ, ರಕ್ಷಣಾ ವೇದಿಕೆ ಅಧ್ಯಕ್ಷ ಆರ್.ಎಸ್. ನಟರಾಜ್, ಕರವೇ ಯುವ ಸಂಘದ ಅಧ್ಯಕ್ಷ ಕಬೀರ್ ಅಹಮದ್, ಟಿ.ಎ.ಪಿ.ಸಿ.ಎಂ.ಎಸ್ ಉಪಾಧ್ಯಕ್ಷ ತೌಫಿಕ್ ಅಹಮದ್, ಬಿಲಿವರ್ಸ್ ಚರ್ಚ್ ಫಾದರ್ ಡಿ.ಸಿ. ಬಸವರಾಜ್, ಮುಖಂಡರಾದ ಎ.ಎಚ್. ಲಕ್ಷ್ಮಣ್, ಎಚ್.ಸಿ. ಶಾಂತಕೃಷ್ಣ, ಕ.ಸಾ.ಪ. ಕಾರ್ಯದರ್ಶಿ ಎ.ಟಿ. ಮಲ್ಲೇಶ್, ಕೋಶಾಧ್ಯಕ್ಷ ಪೃಥ್ವಿ, ಆಲೂರು ಮಂಡಲ ಬಿ.ಜೆ.ಪಿ ಯುವಮೋರ್ಚ ಅಧ್ಯಕ್ಷ ಆರ್. ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.