ADVERTISEMENT

ಕಾಮಸಮುದ್ರದಲ್ಲಿ ನೈರ್ಮಲ್ಯ ಕೊರತೆ

ಮಾಡಾಳು ಶಿವಲಿಂಗಪ್ಪ
Published 19 ಜೂನ್ 2013, 12:39 IST
Last Updated 19 ಜೂನ್ 2013, 12:39 IST

ರಸೀಕೆರೆ: ತಾಲ್ಲೂಕಿನ ಗಡಿ ಭಾಗ ಕಾಮಸಮುದ್ರ ಗ್ರಾಮದಲ್ಲಿ ಎಲ್ಲಿ ನೋಡಿದರೂ ಕಸ-ಕಡ್ಡಿ, ಪ್ಲಾಸ್ಟಿಕ್ ಚೀಲಗಳದ್ದೇ ಕಾರುಬಾರು ಎಂಬಂತಾಗಿದೆ.

ಪ್ರತಿನಿತ್ಯ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಊರಿನ ಒಳಕ್ಕೆ ಹೋಗುವ ರಸ್ತೆಯ ಎರಡೂ ಬದಿಯ ಕಸದ ರಾಶಿಗಳು ಬರುವ ಜನರನ್ನು ಸ್ವಾಗತಿಸುತ್ತವೆ. ಎಲ್ಲೆಂದರಲ್ಲಿ ಕಸದ ರಾಶಿ, ಆಳೆತ್ತರ ಬೆಳೆದ ಗಿಡ-ಗಂಟಿಗಳು, ಸ್ವಚ್ಛತೆ ಇಲ್ಲದೆ ಕೊಳೆತು ನಾರುತ್ತಿರುವ ಚರಂಡಿಗಳು ಜನರಿಗೆ ಮುಜುಗರ ಉಂಟುಮಾಡುತ್ತವೆ.

ಚರಂಡಿಗಳನ್ನು ಸ್ವಚ್ಛಗೊಳಿಸಿ ಸುಮಾರು ವರ್ಷಗಳೇ ಕಳೆದಿವೆ. ಜನತೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ದಲಿತ ಕಾಲೊನಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ಇರುವ ಚರಂಡಿಗಳು ಹೂಳು ತೆಗೆಯದೆ ಗಬ್ಬು ನಾರುತ್ತಿವೆ. ರಸ್ತೆ ಬದಿ ಮಾಂಸದಂಗಡಿಗಳ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಸಹ ಹೆಚ್ಚಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಓಡಾಡುವ ಜನ ಮೂಗು ಮುಚ್ಚಿಕೊಂಡು ಗ್ರಾಮ ಪ್ರವೇಶಿಸಬೇಕಿದೆ.    

ಗ್ರಾಮ ಮಾತ್ರವಲ್ಲ ಗ್ರಾಮ ಪಂಚಾಯಿತಿ ಅಕ್ಕ-ಪಕ್ಕದಲ್ಲಿಯೇ ಕಸದ ರಾಶಿ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರಸ್ತೆಯಲ್ಲಿ ಕಸ-ಕಡ್ಡಿ ತ್ಯಾಜ್ಯಗಳು ಹೆಚ್ಚಿದ್ದು, ಆಸ್ಪತ್ರೆಗೆ ಬರುವ ರೋಗಿಗಳೂ ದುರ್ನಾತ ಸಹಿಸಿಕೊಳ್ಳಬೇಕು.

ಗ್ರಾಮ ಪಂಚಾಯಿತಿಗಳಿಗೆ ಈಗ ಹೆಚ್ಚು ಅಧಿಕಾರ ಹಾಗೂ ಅಧಿಕ ಅನುದಾನ ಹರಿದು ಬರುತ್ತಿದೆಯಾದರೂ ಹಣ ಸದ್ಬಳಕೆಯಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಗ್ರಾಮ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ನೀರು ಪೂರೈಕೆಗೆ ನೀರು ಸರಬರಾಜು ವ್ಯವಸ್ಥೆ ಇದ್ದರೂ 5-6 ತಿಂಗಳಿನಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮುಖಂಡರು ದೂರಿದ್ದಾರೆ. ಕನಿಷ್ಠ ಮೂಲಸೌಲಭ್ಯ ಕಲ್ಪಿಸಲೂ ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.