ADVERTISEMENT

ಕಾರ್ಯಕರ್ತರಲ್ಲಿ ಚೈತನ್ಯ ತಂದ ಸೋನಿಯಾ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಮೇ 2012, 9:15 IST
Last Updated 1 ಮೇ 2012, 9:15 IST

ಚನ್ನರಾಯಪಟ್ಟಣ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೋಮವಾರ ಇಲ್ಲಿ ತಿಳಿಸಿದರು.

ಹಿರೀಸಾವೆಯಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಿನ್ನಾಭಿಪ್ರಾಯ ತೊರೆದು ಪಕ್ಷಕ್ಕಾಗಿ ದುಡಿಯಬೇಕು ಎಂದು ಸೋನಿಯಾ ಅವರು ಸಲಹೆ ನೀಡಿದ್ದಾರೆ. ಅದರಂತೆ ನಡೆದುಕೊಂಡು ಪಕ್ಷವನ್ನು ರಾಜ್ಯದಲ್ಲಿ ಸದೃಢವಾಗಿ ಸಂಘಟಿಸಲಾಗುವುದು ಎಂದು ಹೇಳಿದರು.

ಸೋನಿಯಾಗಾಂಧಿ ಅವರು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವ ವಿಚಾರದ ಬಗ್ಗೆ ಅನ್ಯ ಪಕ್ಷದ ನಾಯ ಕರು ವಿನಾ ಕಾರಣ ಟೀಕೆ ಮಾಡುವುದು ತರವಲ್ಲ. ರಾಜ್ಯದ ಬರ ಪರಿಸ್ಥಿತಿ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ವಿವರಿಸಲಾಗಿದೆ. ರಾಜ್ಯಕ್ಕೆ ಹೆಚ್ಚು ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಕರೆದ ಸರ್ವಪಕ್ಷಗಳ ಸಭೆಗೆ ಹಾಜರಾಗಿದ್ದೇವೆ. ಕೇಂದ್ರ ಸರ್ಕಾರದ ಬಳಿ ಕೊಂಡೊಯ್ಯುವ ನಿಯೋಗದಲ್ಲಿ ಕಾಂಗ್ರೆಸ್ ನಾಯಕರು ಇರುತ್ತಾರೆ  ಎಂದು ಹೇಳಿದರು.

ಸ್ಥಳೀಯ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು ಕಾಂಗ್ರೆಸ್ ಸೇರುವುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಇದುವರೆಗೆ ಅರ್ಜಿ ಸಲ್ಲಿಸಿಲ್ಲ. ಈ ಬಗ್ಗೆ ತಮ್ಮ ಜೊತೆ ಚರ್ಚಿಸಿಲ್ಲ. ಕಾಂಗ್ರೆಸ್ ಸೇರುವವರು ನಿಯಮದ ಪ್ರಕಾರ 3 ವರ್ಷ ಸೇವೆ ಸಲ್ಲಿಸಬೇಕು. ಆದರೆ ಇಂತಹ ವಿಚಾರದಲ್ಲಿ ಪರಾಮರ್ಶೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವರಿಷ್ಠರಿಗಿದೆ ಎಂದು ಉತ್ತರಿಸಿದರು.

ಕಾಂಗ್ರೆಸ್ ಮುಖಂಡರಾದ ಬಿ. ಶಿವರಾಂ. ಎಸ್.ಎಂ. ಆನಂದ್. ಎಚ್.ಎಸ್. ವಿಜಯಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.