ಸಕಲೇಶಪುರ: ಜನರು ನೀಡಿರುವ ಅಧಿಕಾರವನ್ನು ಮಗ, ಸೊಸೆ, ಮೊಮ್ಮಗ ಹಾಗೂ ಕುಟುಂಬದ ಸದಸ್ಯರಿಗೆ ರಾಜಕೀಯ ಶಕ್ತಿ ನೀಡಲು ಬಳಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಶಾಸಕ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಎ. ಮಂಜು ಆರೋಪಿಸಿದರು.
ಇಲ್ಲಿಯ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಮಲೆನಾಡಿನಲ್ಲಿ ಕಾಫಿ, ಏಲಕ್ಕಿ ಬೆಳೆಗಾರರ ಯಾವ ಸಮಸ್ಯೆಗಳಿಗೆ ದೇವೇಗೌಡರು ಸ್ಪಂದಿಸಿದ್ದಾರೆ. ಕಾಡಾನೆ ಸಮಸ್ಯೆಯಿಂದ ಪ್ರಾಣ, ಬೆಳೆ ಹಾಗೂ ಆಸ್ತಿ ಕಳೆದುಕೊಂಡು ಕಳೆದ ಒಂದು ದಶಕದಿಂದ ನರಕಯಾತನೆ ಅನುಭವಿಸುತ್ತಿರುವ ಆಲೂರು– ಸಕಲೇಶಪುರ ಜನರಿಗೆ ಇವರಿಂದ ಯಾವ ಉಪಯೋಗವಾಗಿದೆ? ರಸ್ತೆ, ವಿದ್ಯುತ್, ಸಾರಿಗೆ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳಿಗೆ ಇವರ ಕೊಡುಗೆಯಾದರೂ ಏನು..? ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
‘ಜನರ ಈ ಯಾವುದೇ ಪ್ರಶ್ನೆಗಳಿಗೆ ಅವರಿಂದ ಉತ್ತರವಿಲ್ಲ, ‘ಕಣ್ಣೀರು ಮತ್ತು ಇದು ನನ್ನ ಕೊನೆಯ ಚುನಾ ವಣೆ’ – ಇದೇ ಅಜೆಂಡಾಗಳನ್ನು ಮತ್ತೊಮ್ಮೆ ಮತದಾರರ ಮುಂದಿಟ್ಟು ಕೊಂಡು ಮತ ಕೇಳುತ್ತಾರೆ. ಈ ಬಾರಿ ಮತದಾರರು ಅಭಿವೃದ್ಧಿಯ ಮಾನದಂಡ ಮುಂದಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸುತ್ತಾರೆ’ ಎಂದರು.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, 10 ವರ್ಷಗಳಲ್ಲಿ ದೇವೇಗೌಡರ ಸಂಸದರ ನಿಧಿಯ 35 ಕೋಟಿ ರೂಪಾಯಿ ಅನುದಾನದಲ್ಲಿ ಆಲೂರು– ಸಕಲೇಶಪುರ ತಾಲ್ಲೂಕಿಗೆ ನೀಡಿರು ವುದು ಕೇವಲ 45 ಲಕ್ಷ ರೂಪಾಯಿ ಮಾತ್ರ. ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟ ಅಭಿವೃದ್ಧಿಗೆ, ಪಶ್ಚಿಮಘಟ್ಟ ಯೋಜನೆ ಅಡಿ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಹಣವನ್ನು ಹೊಳೆನರಸೀಪುರ ತಾಲ್ಲೂಕಿಗೆ ತೆಗೆದು ಕೊಂಡು ಹೋದ ದೇವೇಗೌಡರು ಹಾಗೂ ರೇವಣ್ಣ ಹೇಗೆ ತಾಲ್ಲೂಕಿನ ಜನರನ್ನು ಮತ ಕೇಳಲು ಬರುತ್ತಾರೆ ಎಂದು ಪ್ರಶ್ನೆ ಮಾಡಿದರು.
ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಬಿ. ಶಿವರಾಂ ಮಾತನಾಡಿದರು. ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಪುಟ್ಟೇಗೌಡ ಮಾತನಾಡಿದರು.
ಮಾಜಿ ಶಾಸಕ ಡಿ. ಮಲ್ಲೇಶ್, ಎಸ್.ಎಂ. ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್, ಕಾರ್ಯದರ್ಶಿ ಕೊಲ್ಲಹಳ್ಳಿ ಸಲೀಂ, ಪಕ್ಷದ ಮುಖಂಡ ರಾದ ಎಚ್.ಪಿ. ಕಾಂತರಾಜ್, ಡಿ.ಸಿ. ಸಣ್ಣಸ್ವಾಮಿ, ವೈ.ಪಿ. ರಾಜೇಗೌಡ, ಗೊದ್ದು ಲೋಕೇಶ್, ಮಸ್ತಾರೆ ಲೋಕೇಶ್ ಇದ್ದರು. ಕಿರೇಹಳ್ಳಿ ಶಿವಕುಮಾರ್, ಜಾಕೀರ್ ಸೇರಿದಂತೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.