ADVERTISEMENT

ಕೃಷಿಕನ ತೋಟಕ್ಕೆ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:45 IST
Last Updated 11 ಡಿಸೆಂಬರ್ 2013, 8:45 IST

ಚನ್ನರಾಯಪಟ್ಟಣ: ಅಮೆರಿಕದ ನ್ಯೂ ಚಾಪ್ಟರ್‌ ಕಾರ್ಪೋರೇಟೆಡ್‌ ಸಂಸ್ಥೆ ಮತ್ತು ಬೆಂಗಳೂರಿನ ಫಲದ ಅಗ್ರೋ ಸಂಶೋಧನಾ ಸಂಸ್ಥೆಯ ಪದಾಧಿಕಾರಿಗಳು ತಾಲ್ಲೂಕಿನ ಗೊಲ್ಲರ ಹೊಸಹಳ್ಳಿ ಗ್ರಾಮದ ಸಾವಯವ ಕೃಷಿಕ ಜಿ.ಕೆ. ಗಣೇಶ್‌ ತೋಟಕ್ಕೆ ಮಂಗಳವಾರ ಭೇಟಿ ನೀಡಿದರು.

ನ್ಯೂ ಚಾಪ್ಟರ್‌ ಕಾರ್ಪೋರೇಟೆಡ್‌ ಸಂಸ್ಥೆಯ ನಿರ್ದೇಶಕಿ ಸಾರ ನ್ಯೂಮಾರ್ಕ್‌ ಇನ್ನಿತರೆ ಪದಾಧಿಕಾರಿಗಳು ಗಣೇಶ್‌ ಅವರ ತೋಟದಲ್ಲಿ ಬೆಳೆದಿರುವ ಅಡಿಕೆ, ತೆಂಗು, ಅರಿಸಿನ, ಜೀವಾಮೃತ, ಜೇನು ಸಾಕಾಣಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ‘ಸಸ್ಯ ವೈವಿಧ್ಯದ ಗಿಡಗಳ’ನ್ನು ಸಾವಯವ ಕೃಷಿಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಫಲದ ಅಗ್ರೋ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಸಿ.ಎಂ.ಎನ್‌. ಶಾಸ್ತ್ರಿ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 56 ಸಾವಯವ ಕೃಷಿಕರಿದ್ದಾರೆ. ಇವರು 595 ಎಕರೆಯಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಹಮ್ಮಿಕೊಂಡಿರುವ ಆರು ದಿನಗಳ ಪ್ರವಾಸದಲ್ಲಿ ಚನ್ನರಾಯ ಪಟ್ಟಣ, ಕೊಳ್ಳೇಗಾಲ ತಾಲ್ಲೂಕಿಗೆ ಭೇಟಿ ನೀಡಲಾಗಿದ್ದು, ಸಾಗರ, ಭಟ್ಕಳ ತಾಲ್ಲೂಕಿಗೆ ಭೇಟಿ ನೀಡಿ ಸಾವಯವ ಕೃಷಿಕರಿಗೆ ಅಗತ್ಯ ಮಾಹಿತಿ ನೀಡಲಾಗುವುದು ಎಂದರು.

ಸಾವಯವ ಕೃಷಿಕರು ಬೆಳೆದ ಬೆಳೆಗಳನ್ನು ಖರೀದಿಸಿ ಅಮೆರಿಕ ನ್ಯೂ ಚಾಪ್ಟರ್‌ ಸಂಸ್ಥೆಗೆ ರಫ್ತು ಮಾಡಲಾಗುವುದು. ಅರಿಸಿನ, ತುಳಸಿ, ಶುಂಠಿ, ಹಲಸು, ನುಗ್ಗೆ, ದಾಲ್ಚಿನ್ನಿ, ಜಾಯಿಕಾಯಿ, ನಲ್ಲಿಕಾಯಿ ಸೇರಿದಂತೆ ವಿವಿಧ ಬೆಳೆಗೆ ಉತ್ತಮ ಬೇಡಿಕೆ ಇದೆ. ನ್ಯೂ ಚಾಪ್ಟರ್‌ ಸಂಸ್ಥೆ ತನಗೆ ಬರುವ ಆದಾಯದ ಅಲ್ಪ ಭಾಗವನ್ನು ಭಾರತದ ಸಾವಯವ ರೈತರ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ ಎಂದರು.

ನ್ಯೂ ಚಾಪ್ಟರ್‌ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಸಾರ ನ್ಯೂಮಾರ್ಕ್, ಸಾವಯವ ರೈತರಾದ ಅಬ್ದುಲ್‌ ರಿಜ್ವಾನ್‌, ಜಿ.ಕೆ. ಗಣೇಶ್‌, ವೇಣುಗೋಪಾಲ್‌ ಮಾತನಾಡಿದರು. ಸೂರ್ಯಶಾಸ್ತ್ರಿ, ಉಮೇಶ್‌ ಅಡಿಗ, ಮಧ್ವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.