ADVERTISEMENT

ಕೊಠಡಿ ಕೊರತೆ: ನೆಲದ ಮೇಲೆ ಪಾಠ!

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 6:10 IST
Last Updated 29 ಜೂನ್ 2012, 6:10 IST
ಕೊಠಡಿ ಕೊರತೆ: ನೆಲದ ಮೇಲೆ ಪಾಠ!
ಕೊಠಡಿ ಕೊರತೆ: ನೆಲದ ಮೇಲೆ ಪಾಠ!   

ಚನ್ನರಾಯಪಟ್ಟಣ: ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದ ಹಲವು ತರಗತಿಗಳ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ಕಾಲೇಜಿನಲ್ಲಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗವಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಒಟ್ಟು 964 ವಿದ್ಯಾರ್ಥಿ ಗಳು ಕಲಿಯುತ್ತಿದ್ದಾರೆ. ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ 236, ವಾಣಿಜ್ಯ ವಿಭಾಗದಲ್ಲಿ 176, ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳು ಇದ್ದಾರೆ. ದ್ವಿತೀಯ ಪಿಯುಸಿ ವಿಭಾಗದಲ್ಲಿ ಕ್ರಮವಾಗಿ 191, 135 ಹಾಗೂ 106 ವಿದ್ಯಾರ್ಥಿಗಳಿದ್ದಾರೆ. ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ 236 ವಿದ್ಯಾರ್ಥಿಗಳು ಒಂದು ಕೊಠಡಿಯಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕುಳಿತು ಪಾಠಕೇಳುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಡೆಸ್ಕ್ ಮೇಲೆ ಕುಳಿತರೆ, ಜಾಗವಿಲ್ಲದವರು ನೆಲದ ಮೇಲೆ ಕುಳಿತುಕೊಳ್ಳಬೇಕಿದೆ. ಉಪನ್ಯಾಸಕರು ಪಾಠ ಮಾಡುವ ವೇದಿಕೆ ಸುತ್ತ ಕುಳಿತರೆ, ಮತ್ತೆ ಕೆಲವರು ತರಗತಿ ಬಾಗಿಲ ವರೆಗೆ ಕುಳಿತಿದ್ದ ದೃಶ್ಯ ಗುರುವಾರ ಕಂಡು ಬಂದಿತು. ನೋಟ್ಸ್ ಬರೆದುಕೊಳ್ಳಲು, ಬ್ಯಾಗ್ ಇಡಲು ಜಾಗವಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.

ಉಪನ್ಯಾಸಕರು ಕೊಠಡಿಯಲ್ಲಿ ತಿರುಗಲು ಆಗದ ಸ್ಥಿತಿ ಇದೆ. ಒಂದೇ ಕಡೆ ನಿಂತು ಪಾಠ ಮಾಡಬೇಕಿದೆ. ದ್ವಿತೀಯ ಪಿಯು ವಿಜ್ಞಾನ ವಿಭಾಗದ ಸ್ಥಿತಿಯೂ ಇದೆ ರೀತಿ ಇದೆ. ಉಳಿದ ತರಗತಿಯಲ್ಲೂ ಡೆಸ್ಕ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕು. ಕಾಲೇಜಿನಲ್ಲಿ ಐದು ಕೊಠಡಿಗಳಿವೆ, ಅದರಲ್ಲಿ ಒಂದು ಪ್ರಾಚಾರ್ಯರು, ಮತ್ತೊಂದು ಸಿಬ್ಬಂದಿ ಕೊಠಡಿ. ಉಳಿದಂತೆ ಮೂರು ಕೊಠಡಿ ಮಾತ್ರ ಪಾಠ ಮಾಡಲು ಲಭ್ಯ. ಹಾಗಾಗಿ ಪಕ್ಕದ ಸರ್ಕಾರಿ ಶಾಲೆಗೆ ಸೇರಿದ 8 ಕೊಠಡಿಗಳಲ್ಲಿ ಕಾಲೇಜಿನ ತರಗತಿ ನಡೆಸಲಾಗುತ್ತಿದೆ. ಕೊಠಡಿಗಳ ಕೊರತೆ ನೀಗಿಸಲು ಕಾಲೇಜಿನ ಮೇಲು ಅಂತಸ್ತಿನಲ್ಲಿ ಶೀಘ್ರ ಆರು ಕೊಠಡಿ ನಿರ್ಮಿಸಿದರೆ ಸಮಸ್ಯೆ ಬಗೆ ಹರಿಯಲಿದೆ. ಈಚೆಗೆ ಕಾಲೇಜಿಗೆ ಭೇಟಿ ಶಾಸಕರು, ಕಾಲೇಜಿಗೆ ಸೌಕರ್ಯ ಒದಗಿಸುವುದಾಗಿ ಹೇಳಿದ್ದಾರೆ. ಶೀಘ್ರ ಸಮಸ್ಯೆ ನಿವಾರಿಸಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.

ಕಾಲೇಜು ಆವರಣದ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಪಕ್ಕದ  ಶಾಲೆಯಿಂದ ನೀರು ತರಬೇಕಿದೆ. ಒಂದು `ಡಿ~ ದರ್ಜೆ ನೌಕರ ಹುದ್ದೆ, ವಿಜ್ಞಾನ ವಿಭಾಗದ ಪ್ರಾಯೋಗಿಕ ಕೊಠಡಿಯ ಮೂರು ಸಹಾಯಕ ಹುದ್ದೆಗಳು ಖಾಲಿ ಇವೆ. ಈ ಪೈಕಿ ಇಬ್ಬರು `ಡಿ~ ದರ್ಜೆ ನೌಕರರನ್ನು ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ನೇಮಿಸಿಕೊಂಡು ವೇತನ ನೀಡಲಾಗುತ್ತಿದೆ. ಪ್ರತಿ ವರ್ಷ ಉತ್ತಮ ಫಲಿತಾಂಶದಿಂದ ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತಿಸಿ ಅಗತ್ಯ ಸೌಕರ್ಯ ಒದಗಿಸಬೇಕು ಎನ್ನುತ್ತಾರೆ ಜನತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.