ADVERTISEMENT

ಖರೀದಿ ಕೇಂದ್ರ ದೂರ: ಸಿಗದ ಬೆಂಬಲಬೆಲೆ!

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2014, 6:55 IST
Last Updated 9 ಫೆಬ್ರುವರಿ 2014, 6:55 IST
ಅರಕಲಗೂಡು ಕೊಣನೂರು ನಡುವಿನ ಹದಗೆಟ್ಟಿರುವ ರಸ್ತೆ
ಅರಕಲಗೂಡು ಕೊಣನೂರು ನಡುವಿನ ಹದಗೆಟ್ಟಿರುವ ರಸ್ತೆ   

ಅರಕಲಗೂಡು: ರಾಜ್ಯ ಸರ್ಕಾರ ಕೃಷಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿದ್ದರೂ ತಾಲ್ಲೂಕಿನ ಎರಡು ಹೋಬಳಿಗಳ ರೈತರು ವಂಚಿತವಾಗಬೇಕಾದ ಪರಿಸ್ಥಿತಿ ಉಂಟಾಗಿದೆ.

ತಾಲ್ಲೂಕಿನಲ್ಲಿ ಮುಸುಕಿನ ಜೋಳ ಹಾಗೂ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಪಟ್ಟಣದ ಎಪಿಎಂಸಿ  ಉಪಮಾರುಕಟ್ಟೆ ಆವರಣ ದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ, ತಾಲ್ಲೂಕಿನ ರಾಮನಾಥಪುರ ಹಾಗೂ ಕೊಣನೂರು ಹೋಬಳಿಗಳ ರೈತರು ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ತೊಡಕು ಎಂದರೆ ಸಾಗಣೆ ವೆಚ್ಚ ಹಾಗೂ ಹದಗೆಟ್ಟಿರುವ ರಸ್ತೆ.

ತಾಲ್ಲೂಕು ಕೇಂದ್ರ ಅರಕಲಗೂಡಿನಿಂದ ರಾಮನಾಥಪುರ 20ಕಿ.ಮೀ, ಕೊಣನೂರು 24ಕಿ.ಮೀ. ಹಾಗೂ ರಾಮನಾಥಪುರ ಹೋಬಳಿಯ ಪ್ರಮುಖ ಊರುಗಳಾದ ಬಸವಾಪಟ್ಟಣ 30ಕಿ.ಮೀ ಹಾಗೂ ಕೇರಳಾಪುರ 34ಕಿ.ಮೀ ಅಂತರದಲ್ಲಿದೆ.

ಇಲ್ಲಿಂದ ಖರೀದಿ ಕೇಂದ್ರಕ್ಕೆ ಜೋಳ ಹಾಗೂ ಭತ್ತ ತರಲು ಸಾಗಾಣಿಕೆ ವೆಚ್ಚವೇ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಸ್ವಂತ ವಾಹನ ಹೊಂದಿದ್ದವರು ಕಷ್ಟಪಟ್ಟು ತರಬಹುದು. ಆದರೆ, ಬಾಡಿಗೆ ವಾಹನ ಅವಲಂಬಿಸಿದವರದ್ದು ಕಷ್ಟದ ಸ್ಥಿತಿ.

ಇನ್ನು ಕೊಣನೂರು ಅರಕಲಗೂಡು ನಡುವಿನ ರಸ್ತೆ ವರ್ಣಿಸಲು ಅಸಾಧ್ಯ. ಜನಸಾಮಾನ್ಯರೇ ವಾಹನಗಳಲ್ಲಿ ಜೀವ ಬಿಗಿಹಿಡಿದು ಓಡಾಡಬೇಕಿದೆ. ಇನ್ನು ಧಾನ್ಯ ತುಂಬಿಕೊಂಡು ಬರುವ ವಾಹನಗಳ ಪಾಡು ಹೇಳತೀರದಾಗಿದೆ. ಹೀಗಾಗಿ ಈ ಭಾಗದ ರೈತರು ಬೆಂಬಲ ಬೆಲೆಯ ಆಸೆಯನ್ನು ಕೈಬಿಟ್ಟು ಸ್ಥಳಿಯವಾಗಿಯೇ ಮಧ್ಯವರ್ತಿಗಳು ನಿಗದಿಗೊಳಿಸಿದ ದರಕ್ಕೆ ಮಾರಾಟ ಮಾಡಬೇಕಿದೆ.


ಕೊಣನೂರು, ರಾಮನಾಥಪುರ ಹೋಬಳಿಗಳು ಕಾವೇರಿ, ಹಾರಂಗಿ ನಾಲೆಗಳ ನೀರಾವರಿ ಆಶ್ರಯದಲ್ಲಿ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಮನಾಥಪುರ ಹೋಬಳಿಯಲ್ಲಿ 4ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 450 ಹೆಕ್ಟೇರ್‍ ನಲ್ಲಿ ಮುಸುಕಿನ ಜೋಳ ಬೆಳೆದಿದ್ದರೆ ಕೊಣನೂರು ಹೋಬಳಿಯಲ್ಲಿ 4050ಹೆ. ನಲ್ಲಿ ಭತ್ತ 2800 ಹೆಕ್ಟೇರ್‌ ಮುಸುಕಿನ ಜೋಳ ಬೆಳೆಯಲಾಗಿದೆ.

ADVERTISEMENT

ಇಲ್ಲಿಯೇ ಖರೀದಿ ಕೇಂದ್ರ ತೆರೆಯಿರಿ

ಸಾಗಣೆ ವೆಚ್ಚ, ರಸ್ತೆ ದುಸ್ಥಿತಿಯಿಂದಾಗಿ ಸರ್ಕಾರದ ನೆರವು ರೈತರಿಗೆ ದೊರೆಯದಂತಾಗಿದೆ. ಸರ್ಕಾರಕ್ಕೆ ರೈತರ ಕುರಿತು ನಿಜವಾದ ಕಾಳಜಿ ಇದ್ದಲ್ಲಿ ರಾಮನಾಥಪುರದಲ್ಲಿ ಇನ್ನೊಂದು ಖರೀದಿ ಕೇಂದ್ರ ತೆರೆಯಲಿ.
–ಸಂತೋಷ್ ಗೌಡ. ತಾ.ಪಂ. ಮಾಜಿ ಅಧ್ಯಕ್ಷ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.