ADVERTISEMENT

ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನ ಭಾರತಿ ವಿದ್ಯಾಸಂಸ್ಥೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 8:10 IST
Last Updated 1 ಜುಲೈ 2012, 8:10 IST

ಶನಿವಾರಸಂತೆ:  ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವೆನಿಸಿದೆ.

ಇದೇ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹೊರ ಜಿಲ್ಲೆಗಳಿಗೆ ಹೋಗಬೇಕಾಗಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಕೂಲಿ ಕಾರ್ಮಿಕರ ಮಕ್ಕಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ವಿದ್ಯಾರ್ಥಿಗಳ ಈ ಬವಣೆ ಕಂಡ ಭಾರತಿ ವಿದ್ಯಾಸಂಸ್ಥೆಯ ಹಿಂದಿನ ಅಧ್ಯಕ್ಷ ಎನ್.ಬಿ.ಗುಂಡಪ್ಪ ನೇತೃತ್ವದ ಆಡಳಿತ ಮಂಡಳಿ, ಪ್ರಾಂಶುಪಾಲರಾಗಿದ್ದ ಎಂ.ನಾಗೇಶ್ ಹಾಗೂ ಉಪನ್ಯಾಸಕ ಎಚ್.ಕೆ.ರಾಮನಂಜಯ್ಯ ಅವರ ಪ್ರಯತ್ನದ ಫಲವಾಗಿ 1996ರ ಜುಲೈ 22ರಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟು ಪ್ರಥಮ ದರ್ಜೆ ಕಾಲೇಜು ಸುಂದರ ಪರಿಸರದಲ್ಲಿ ಹುಟ್ಟಿಕೊಂಡಿತು.

ದಾನಿ ವೆಂಕಟರಮಣ ಗೌಡರು ನೀಡಿದ 1 ಲಕ್ಷ 5 ಸಾವಿರ ರೂಪಾಯಿ ಹಣದಲ್ಲಿ ಅವರ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ. ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಸ್ತೆ ಬದಿಯಲ್ಲಿರುವ ಕಾಲೇಜಿನ ಆರಂಭದಲ್ಲಿ ಬಿ.ಎ., ಬಿ.ಕಾಂ. ಕೋರ್ಸ್‌ಗಳನ್ನು ಆರಂಭಿಸಿದಾಗ ಮೊದಲಿಗೆ 125 ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆದರು. ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿ 1999ರವರೆಗೆ ಪ್ರಾಂಶುಪಾಲರಾಗಿದ್ದ ಎಂ.ನಾಗೇಶ್ ಹಾಗೂ ಉಪನ್ಯಾಸಕ ವೃಂದ ಉತ್ತಮ ಫಲಿತಾಂಶ ತರುವಲ್ಲಿ ಸಫಲವಾಯಿತು.

ಇದೀಗ ಎಸ್.ಎಂ.ಉಮಾಶಂಕರ್ ಪ್ರಾಂಶುಪಾಲರಾಗಿದ್ದು, ಐದಾರು ವರ್ಷಗಳಿಂದೀಚೆಗೆ ಬಿ.ಬಿ.ಎಂ. ಕೋರ್ಸ್‌ನ್ನು ಆರಂಭಿಸಲಾಗಿದೆ. ಇಂದು ಕಾಲೇಜಿನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಶನಿವಾರಸಂತೆ ಹೋಬಳಿ ಮಾತ್ರವಲ್ಲದೇ ನೆರೆಯ ಹಾಸನ ಜಿಲ್ಲೆಯ ಕೆಲ ಗ್ರಾಮಗಳು ಹಾಗೂ ಸೋಮವಾರಪೇಟೆ ಸಮೀಪದ ಗ್ರಾಮಗಳ ಹಲವು ವಿದ್ಯಾರ್ಥಿಗಳು ಈ ಕಾಲೇಜಿನ್ಲ್ಲಲೇ ಓದುತ್ತಿದ್ದಾರೆ.

ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ರಾಜ್ಯಶಾ, ವಾಣಿಜ್ಯ ವಿಭಾಗದಲ್ಲಿ (ಬಿ.ಕಾಂ.,ಬಿ.ಬಿ.ಎಂ.,) ವಿಶ್ವವಿದ್ಯಾನಿಲಯ ನಿಗದಿ ಪಡಿಸಿದ ವಾಣಿಜ್ಯ ವಿಷಯಗಳನ್ನು ಕಲಿಯಬಹುದು. ನಾಲ್ಕು ವರ್ಷಗಳಿಂದ ಕಾಲೇಜು ಬಿ.ಎ.ಪದವಿಯಲ್ಲಿ ಜಿಲ್ಲೆಯ್ಲ್ಲಲೇ ಮೊದಲ ಸ್ಥಾನದ ಉತ್ತಮ ಫಲಿತಾಂಶ ಹಾಗೂ 2 ವರ್ಷಗಳಿಂದ ಬಿ.ಕಾಂ.ನಲ್ಲೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುತ್ತೆ ಸಾಧನೆ ಮಾಡುತ್ತಿದೆ.

ಶೇ. 75 ರಷ್ಟು ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ 1,000 ರೂಪಾಯಿ ಶುಲ್ಕ ವಿನಾಯಿತಿ, ಶೇ. 85 ರಷ್ಟು ಫಲಿತಾಂಶ ಪಡೆವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸಾಂಸ್ಕೃತಿಕ ವೇದಿಕೆ, ಉದ್ಯೋಗ ಮಾಹಿತಿ ಕೇಂದ್ರ, ವಿದ್ಯಾರ್ಥಿ ಗ್ರಾಹಕರ ಕ್ಲಬ್, ಕಲಾ ಹಾಗೂ ವಾಣಿಜ್ಯ ಸಂಘ, ಹಳೇ ವಿದ್ಯಾರ್ಥಿಗಳ ಸಂಘ, ಮಹಿಳಾ ದೌರ್ಜನ್ಯ ತಡೆ ಘಟಕ, ಮಾನವ ಹಕ್ಕುಗಳ ರಕ್ಷಣಾ ಘಟಕ, ಕಾಲೇಜು ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರತ್ಯಕ ಎನ್.ಎಸ್.ಎಸ್.ಘಟಕಗಳಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿವೆ.

ಈ ಪ್ರಥಮ ದರ್ಜೆ ಕಾಲೇಜು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಬಹಳ ಅನುಕೂಲವಾಗಿದೆ. ಪ್ರಸ್ತುತ ಆಡಳಿತಮಂಡಳಿಯ ಅಧ್ಯಕ್ಷ ಎನ್.ಬಿ.ನಾಗಪ್ಪ ಹಾಗೂ ಪದಾಧಿಕಾರಿಗಳು ಮತ್ತು ಪ್ರಾಂಶುಪಾಲ ಉಮಾಶಂಕರ್ ಅವರಿಗೆ  ಕಾಲೇಜನ್ನು ಮಾದರಿ ಕಾಲೇಜು ಮಾಡುವ, ಅಲ್ಪಾವಧಿಯ ವೃತ್ತಿಶಿಕ್ಷಣದ ಕೋರ್ಸ್ ಆರಂಭಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಸ್ಪರ್ಧಾತ್ಮಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ನೀಡುವ ಇಚ್ಛೆ ಇದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.