ADVERTISEMENT

ಚನ್ನಕೇಶವ ರಥೋತ್ಸವ: ಭಾವೈಕ್ಯದ ಸಂಕೇತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:22 IST
Last Updated 23 ಏಪ್ರಿಲ್ 2013, 6:22 IST

ಬೇಲೂರು: ದಕ್ಷಿಣ ಭಾರತದ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಹಿಂದೂ-ಮುಸ್ಲಿಂ ಭಾವೈಕ್ಯಕ್ಕೂ ಸಾಕ್ಷಿಯಾಗಿದೆ. ರಥದ ಮೇಲೆ ಉತ್ಸವ ಮೂರ್ತಿಯನ್ನು ಪೀಠದಲ್ಲಿ ಕೂರಿಸದೆ ಉಯ್ಯಾಲೆಯಂತೆ ಕಟ್ಟುವುದು ಇಲ್ಲಿನ ವಿಶೇಷತೆಯಾಗಿದೆ.

ರಥೋತ್ಸವದ ಅಂಗವಾಗಿ 14 ದಿನಗಳ ಕಾಲ ವಿವಿಧ ಉತ್ಸವಾದಿಗಳು ನಡೆಯಲಿದೆ. ಯುಗಾದಿ ಹಬ್ಬ ಬಂತೆಂದರೆ ಬೇಲೂರಿನಲ್ಲಿ ರಥೋತ್ಸವ ಸಂಭ್ರಮ ಆರಂಭಗೊಳ್ಳುತ್ತವೆ. ಯುಗಾದಿಯ ಮುನ್ನಾದಿನ ಖಜಾನೆಯಿಂದ ಚಿನ್ನಾಭರಣ ದೇವಾಲಯಕ್ಕೆ ತರಲಾಗುತ್ತದೆ. ಯುಗಾದಿಯಂದು ಚನ್ನಕೇಶವಸ್ವಾಮಿ ಮತ್ತು ಸೌಮ್ಯನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುತ್ತದೆ. ಶಾರದಾಲಂಕಾರೋತ್ಸವದ ಮೂಲಕ ಉತ್ಸವಗಳಿಗೆ ಚಾಲನೆ ದೊರೆತರೆ ಶಯನೋತ್ಸವದಂದು ಅಂತ್ಯಗೊಳ್ಳುತ್ತದೆ. ಉತ್ಸವಗಳ ಪೈಕಿ ರಥೋತ್ಸವದ ಮುನ್ನಾ ದಿನದ ಮಧ್ಯರಾತ್ರಿ ನಡೆಯುವ ಗರುಡೋತ್ಸವ ಜನಪ್ರಿಯ ಉತ್ಸವಗಳಲ್ಲಿ ಒಂದಾಗಿದೆ.

ಯುಗಾದಿಯಿಂದ 12ನೇ ದಿನ ನಡೆಯುವ ಚನ್ನಕೇಶವಸ್ವಾಮಿಯ `ಬ್ರಹ್ಮ ರಥೋತ್ಸವ' ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಹಿಂದಿನ ರಾತ್ರಿಯ ಗರುಡೋತ್ಸವದ ನಂತರ ಮೂಲ ವಿಗ್ರಹ ಮತ್ತು ಉತ್ಸವ ಮೂರ್ತಿಗಳನ್ನು ಅಲಂಕರಿಸಿ ದರ್ಶನಕ್ಕೆ ಸಿದ್ದಪಡಿಸುತ್ತಾರೆ. ಶ್ರೀದೇವಿ-ಭೂದೇವಿಯರ ಸಮೇತ ಚನ್ನಕೇಶವಸ್ವಾಮಿಯ ಉತ್ಸವ ಮೂರ್ತಿಯನ್ನು ಉತ್ಸವಕ್ಕೋಸ್ಕರ ಅಡ್ಡೆಮಣೆ ಮೇಲೆ ಕೂರಿಸಿ ಬಾಗಿಲು ಮುಚ್ಚಲಾಗುತ್ತದೆ. ಗರುಡೋತ್ಸವದ ದೊಡ್ಡಹಾರ ಸೇರಿದಂತೆ ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಲಾಗುತ್ತದೆ. ರಥದ ಮೇಲೆ ಕಳಶ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ರಥೋತ್ಸವದ ಬೆಳಗಿನ ಜಾವ ಗರ್ಭಗೃಹದ ಬಾಗಿಲು ತೆರೆದು ಪ್ರಾತಃ ಪೂಜೆ ನೆರವೇರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಕಾಯುತ್ತಿರುತ್ತಾರೆ.

ರಥೋತ್ಸವಕ್ಕೆ ಸಂಬಂಧಿಸಿದಂತೆ ಯಾತ್ರಾದಾನ ನೆರವೇರಿಸಿದ ನಂತರ ಉತ್ಸವ ಮೂರ್ತಿಯ ಮೆರವಣಿಗೆ ಹೊರಡಿಸಿ, ರಥ ನಿರೀಕ್ಷಣಾ ನಡೆಸಿದ ಬಳಿಕ 8 ಉತ್ಸವ ಬೀದಿಗಳಲ್ಲಿ ವಿಶೇಷ ಮೆರವಣಿಗೆ ನಡೆಯುತ್ತದೆ. ಈ ಉತ್ಸವವನ್ನು ತ್ರಿಮತಸ್ಥ ಬ್ರಾಹ್ಮಣರೇ ಹೊತ್ತು ಡೋಲಾಯಮಾನವಾಗಿ (ಓಲಾಡಿಸುತ್ತಾ) ನಡೆಸುತ್ತಾರೆ. ಈ ವೇಳೆ ತಮಿಳ್ ಪಾಶುರೈ, ಪ್ರಬಂಧ ಸ್ತೋತ್ರ, ವೇದ ಘೋಷ ಹಾಗೂ ಮಂಗಳವಾದ್ಯದೊಂದಿಗೆ ಪಠಿಸುತ್ತಾ ಪುರ ಮೆರವಣಿಗೆ ಮಾಡಿ ರಥದ ಬಳಿ ನಿರ್ಮಿಸಿದ ಕೇಸರಿ ಮಂಟಪದಲ್ಲಿ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ.

ಉತ್ಸವ ಮೂರ್ತಿಯನ್ನು ರಾಜಗೌರವಗಳೊಂದಿಗೆ ರಥಕ್ಕೆ ಮೂರು ಸುತ್ತ ಪ್ರದಕ್ಷಿಣೆ ಹಾಕಿದ ತರುವಾಯ ರಥದ ಮೇಲೆ ಕರೆತರಲಾಗುತ್ತದೆ. ರಥದ ಮೇಲೆ ಬ್ರಹ್ಮ ಪೀಠ ಇದೆಯಾದರೂ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಕಟ್ಟುವುದು ಬೇಲೂರು ರಥೋತ್ಸವದ ವಿಶೇಷ. `ಉಯ್ಯಾಲೆಯಲ್ಲಿ ತೂಗುತ್ತಿರುವ ಗೋವಿಂದನನ್ನು, ವೇದಿಕೆಯ ಮೇಲೆ ಕುಳಿತಿರುವ ಮಧುಸೂದನನ್ನು, ರಥದಲ್ಲಿರುವ ಕೇಶವನನ್ನು ನೋಡಿದವರಿಗೆ ಪುನರ್ಜನ್ಮ ಇಲ್ಲ' ಎಂಬುದು ಭಕ್ತರ ನಂಬಿಕೆ.

ರಥದ ಮೇಲೆ ಉತ್ಸವಮೂರ್ತಿಯ ಪೂಜೆಗಳು ಮುಕ್ತಾಯಗೊಂಡ ನಂತರ ಬೇಲೂರು ಸಮೀಪದ ದೊಡ್ಡ ಮೇದೂರಿನ ಖಾಜಿ ಸೈಯ್ಯದ್ ಸಜ್ಜಾದ್ ಬಾಷ ಖಾದ್ರಿ ದೇವಾಲಯದ ನವರಂಗ ಮತ್ತು ರಥದ ಮುಂದೆ ಕುರಾನ್‌ನ ಕೆಲ ಭಾಗಗಳನ್ನು ಪಠಣ ಮಾಡಿ ರಥದ ಸರಪಳಿಯನ್ನು ಮುಜರಾಯಿ ಅಧಿಕಾರಿಗಳಿಗೆ ನೀಡುತ್ತಾರೆ. ನಂತರ ಮುಜರಾಯಿ ಅಧಿಕಾರಿಗಳ ನೇತೃತ್ವದಲ್ಲಿ ರಥೋತ್ಸವ ನಡೆಯುತ್ತದೆ. ನಾಲ್ಕು ತಲೆಮಾರುಗಳಿಂದ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡಲಾಗುತ್ತಿದ್ದು, ಇದಕ್ಕಾಗಿ ದೇವಾಲಯದ ವತಿಯಿಂದ ಈಗ 10ಸೇರು ಅಕ್ಕಿ 100 ರೂ. ಗೌರವ ಸಂಭಾವನೆ ನೀಡಲಾಗುತ್ತಿದೆ.

ದೇವಾಲಯದ ಸುತ್ತಲಿನ ನಾಲ್ಕು ಬೀದಿಗಳು ರಥದ ಬೀದಿಗಳಾಗಿದ್ದು, ಆ ಪೈಕಿ ಮೊದಲ ದಿನ ಪೂರ್ವ ದಿಕ್ಕಿನ ಬೀದಿಯಲ್ಲಿ ಈಶಾನ್ಯ ಮೂಲೆಯಿಂದ ಆಗ್ನೇಯ ಮೂಲೆಯವರೆಗೆ ರಥವನ್ನು ಎಳೆಯಲಾಗುತ್ತದೆ. ಮರುದಿನ ಮಧ್ಯಾಹ್ನದವರೆಗೆ ರಾತ್ರಿಯೂ ಸೇರಿದಂತೆ ಉತ್ಸವ ಮೂರ್ತಿ ರಥದಲ್ಲಿಯೇ ಇರುವುದು ಇಲ್ಲಿನ ಮತ್ತೊಂದು ವೈಶಿಷ್ಟ್ಯವಾಗಿದೆ. 2ನೇ ದಿನ ಉಳಿದ ಮೂರು ಬೀದಿಗಳಲ್ಲಿ ರಥವನ್ನು ಎಳೆದು ಸ್ವಸ್ಥಾನಕ್ಕೆ ನಿಲ್ಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.