ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶುಕ್ರವಾರ (ಜೂ.14) ನಡೆಯಲಿ ರುವ `ತಾಲ್ಲೂಕುಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ'ಕ್ಕೆ ಸಿದ್ಧತೆ ಪೂರ್ಣಗೊಂಡಿವೆ.
ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ಪೆಂಡಾಲ್‌ನಲ್ಲಿ 3 ಸಾವಿರ ಸಾಹಿತ್ಯಾಸಕ್ತರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಿನಿ ವಿಧಾನಸೌಧದಲ್ಲಿ ತಾತ್ಕಾಲಿಕ ಕಚೇರಿ ತೆರೆದು ಸಾಹಿತ್ಯಾಸಕ್ತರು, ಶಿಕ್ಷಕರು ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದಾರೆ.
ಪಟ್ಟಣದಲ್ಲಿ ವಿವಿಧ ಸಂಘ, ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸಮ್ಮೇಳನಕ್ಕೆ ಶುಭ ಕೋರಿ ಪ್ಲೆಕ್ಸ್ ಅಳವಡಿಸಿದ್ದಾರೆ. ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಛಗೊಳಿಸುವ ಕಾರ್ಯಕೈಗೊಂಡಿದ್ದಾರೆ.
ಸಮ್ಮೇಳನದ ಸಿದ್ಧತೆ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್, `ಸಮ್ಮೇಳನಾಧ್ಯಕ್ಷ ಡಾ.ಕುಮಾರ ಚಲ್ಯ ಅವರ ಮೆರವಣಿಗೆಯಲ್ಲಿ 25ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ. 350ಮಂದಿ ಮಹಿಳೆಯರು ಕಳಶ ಹೊತ್ತು ಸಾಗುವರು.
ನಾಡಿನ ಇತಿಹಾಸ ಸಾರುವ ಸ್ತಬ್ಧಚಿತ್ರಗಳಿರುತ್ತವೆ. ಪುಸ್ತಕ ಮಳಿಗೆ, ವಸ್ತುಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವೇದಿಕೆಗೆ ರಾಷ್ಟ್ರಕವಿ ಕುವೆಂಪು ಹಾಗೂ ಮಹಾದ್ವಾರಕ್ಕೆ ಹೊಯ್ಸಳ ವೇದಿಕೆ ಎಂದು ಹೆಸರಿಡಲಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ, ನಿಕಟಪೂರ್ವ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಸೇರಿ ಜನಪ್ರತಿನಿಧಿಗಳು, ಗಣ್ಯರು ಆಗಮಿಸಲಿದ್ದಾರೆ.
ಸಮ್ಮೇಳನಕ್ಕೆ 6 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ. ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಶಾಲಾ- ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದೇ ಆವರಣದಲ್ಲಿ ಹೊಸದಾಗಿ ಸಾಹಿತ್ಯ ಪರಿಷತ್ತು ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ಒಂದು ಕೌಂಟರ್ ತೆರೆಯಲಾಗುವುದು' ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.