ADVERTISEMENT

ಜಾವಗಲ್, ಚನ್ನರಾಯಪಟ್ಟಣ: ಬೆಂಕಿಗೆ ರಾಗಿ, ಎಳ್ಳು, ಬತ್ತ ಭಸ್ಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 8:20 IST
Last Updated 19 ಜನವರಿ 2011, 8:20 IST

ಜಾವಗಲ್: ಕೋಳಗುಂದ ಕೆ.ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 95 ಗಾಡಿ ತೆನೆರಾಗಿ, 10ಗಾಡಿ ಹುರುಳಿ ಮೆದೆ, 2ಗಾಡಿ ಹುಚ್ಚೆಳ್ಳು ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಭಸ್ಮವಾಗಿದೆ.

150 ಕ್ವಿಂಟಾಲ್ ರಾಗಿ, 10 ಕ್ವಿಂಟಾಲ್ ಹುರುಳಿ, 2ಕ್ವಿಂಟಾಲ್ ಹುಚ್ಚೆಳ್ಳು ಬೆಂಕಿಗೆ ಆಹುತಿಯಾಗಿದೆ. ಅಂದಾಜು ರೂ.1.5 ಲಕ್ಷ ಹಾನಿ ಸಂಭವಿಸಿದೆ. ಗ್ರಾಮದ ನಾರಾಯಣಪ್ಪ, ಅಪ್ಪಾಜಿ, ಕರಿಯಪ್ಪ, ಕರಿಯಣ್ಣ ಅವರುಗಳಿಗೆ ಇದು ಸೇರಿದೆ.

ಸುದ್ದಿ ತಿಳಿದ ಕೂಡಲೇ ಅರಸೀಕೆರೆ ಅಗ್ನಿ ಶಾಮಕ ದಳದ, ಶಾಲಾ ಮುಖ್ಯಶಿಕ್ಷಕ ಗಂಗಾಧರಶೆಟ್ಟಿ, ಶಿಕ್ಷಕರುಗಳು, ಶಾಲಾ ಮಕ್ಕಳು ಬೆಂಕಿ ಆರಿಸುವ ಕಾರ್ಯ ನಡೆಸಿದರು. ಈ ಘಟನೆ ಕಾಡ್ಗಿಚ್ಚಿನಂತೆ ಗ್ರಾಮದಲ್ಲೆಲ್ಲಾ ಹರಡಿತ್ತು.

ತಾ.ಪಂ.ಸದಸ್ಯೆ ಲೋಲಾಕ್ಷಮ್ಮ, ಎಪಿಎಂಸಿ ಸದಸ್ಯ ಮಹದೇವಪ್ಪ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿದರಲ್ಲದೇ, ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಚನ್ನರಾಯಪಟ್ಟಣ ವರದಿ: ಊರ ಹೊರಗಿರುವ ಕಣದಲ್ಲಿ ರಾಗಿ, ಬತ್ತದ ಫಸಲು ಇದ್ದ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 1.20 ಲಕ್ಷ ರೂ. ಹಾನಿ      ಸಂಭವಿಸಿದ ಘಟನೆ ತಾಲ್ಲೂಕಿನ ಪಡುವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ರೇವಣ್ಣ ಅವರಿಗೆ ಸೇರಿದ ಎರಡುವರೆ ಎಕರೆ ರಾಗಿ, ಮೂರುವರೆ ಎಕರೆ ಬತ್ತ, ರಂಗೇಗೌಡ ಅವರಿಗೆ ಸೇರಿದ ಎರಡುವರೆ ಎಕರೆ ಬತ್ತದ ಫಸಲು ಬೆಂಕಿಗೆ ನಾಶವಾಗಿದೆ. ಬೆಳಿಗ್ಗೆ ಹೊಲಕ್ಕೆ ಕಸ ಒಯ್ಯುತ್ತಿದ್ದ ರೈತರು, ಮೆದೆಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿ ರೈತರಿಗೆ ಸುದ್ದಿ ಮುಟ್ಟಿಸಿದರು.

ಸ್ಥಳಕ್ಕೆ ಧಾವಿಸಿದ ರೈತರು ಪಕ್ಕದಲ್ಲಿರುವ ಗುಂಡಿಯಿಂದ ನೀರು ತಂದು ಹಾಕಿದರು. ಆಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿತು. ಬೆಂಕಿ ನಂದಿಸದಿದ್ದರೆ ಪಕ್ಕದಲ್ಲಿದ್ದ ಬೇರೆ ಮೆದೆಗಳಿಗೆ ಬೆಂಕಿ ಬೀಳುತ್ತಿತ್ತು.

ಶ್ರಮವಹಿಸಿ ಬೆಳೆದಿದ್ದ ರಾಗಿ, ಬತ್ತದ ಫಸಲು ಬೆಂಕಿಗೆ ಆಹುತಿಯಾಗಿರುವುದರಿಂದ ರಾಗಿ. ಅಕ್ಕಿಯನ್ನು ಕೊಂಡು ತರುವಂತಾಗಿದೆ. ರಾಸುಗಳಿಗೆ  ಅಗತ್ಯವಿರುವ ಮೇವನ್ನು ಖರೀದಿಸಿ ತರಬೇಕಿದೆ ಎಂದು ರೈತರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.