ADVERTISEMENT

ಜೆಡಿಎಸ್- ಕಾಂಗ್ರೆಸ್ ನೇರ ಹಣಾಹಣಿ

ಕ್ಷೇತ್ರ: ಹಾಸನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 5:55 IST
Last Updated 10 ಏಪ್ರಿಲ್ 2013, 5:55 IST

ಹಾಸನ: ಹಾಸನ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಸ್ಪರ್ಧೆ. ಉಳಿದ ಯಾವ ಪಕ್ಷವೂ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಲಾರವು ಎಂಬ ಸ್ಥಿತಿ ಈಗ ಇದೆ.

ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೊಷಿಸಿಯಾಗಿದೆ. ಹಾಲಿ ಶಾಸಕ ಪ್ರಕಾಶ್ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದವರು ಹೇಳುತ್ತಿದ್ದರೂ ಪಕ್ಷ ಇನ್ನೂ ಅಧಿಕೃತವಾಗಿ ಅವರ ಹೆಸರನ್ನು ಘೋಷಿಸಿಲ್ಲ. ಚುನಾವಣೆಯಲ್ಲಿ ಗೆಲ್ಲುವುದಕ್ಕೂ ಮೊದಲು ಪ್ರಕಾಶ್ ತಮ್ಮ ಪಕ್ಷದೊಳಗೆ ಎದ್ದಿರುವ ವಿರೋಧಿಗಳ ಬಂಡಾಯವನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಜತೆಗೆ ಪ್ರಕಾಶ್‌ಗೆ ಟಿಕೆಟ್ ನೀಡುತ್ತಿಲ್ಲವಂತೆ, ರೇವಣ್ಣ ಅವರೇ ಹಾಸನಕ್ಕೆ ಬರ್ತಾರೆ. ಹೀಗೆ ದಿನಕ್ಕೊಂದು ಬರುವ ಸುದ್ದಿಗಳು ಪಕ್ಷದಲ್ಲಿನ್ನೂ ಗೊಂದಲವಿದೆ ಎಂಬುದನ್ನು ಸೂಚಿಸುತ್ತಿವೆ.

1923ರ ನಂತರ ಹಾಸನ ಕ್ಷೇತ್ರದಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳೇ ಗೆದ್ದಿದ್ದಾರೆ. 70ರ ದಶಕದ ಕೊನೆಯಲ್ಲಿ ಆರಂಭವಾದ ರೈತ ಚಳವಳಿ ಇಲ್ಲಿ ಅಂಥ ಬೀಜ ಬಿತ್ತಿದೆ. 1983 ಮತ್ತು 85ರಲ್ಲಿ ಜನತಾ ಪಕ್ಷ ದಿಂದ ಬಿ.ವಿ. ಕರೀಗೌಡ ಗೆದ್ದಿದ್ದಾರೆ. 1999ರಲ್ಲಿ ಕೆ.ಎಚ್.ಹನುಮೇಗೌಡರು ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. ಇದಾದ ಬಳಿಕ ಮತ್ತೆ ಈ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಹೋಗಿದೆ. 1994, 2004 ಹಾಗೂ 2008ರಲ್ಲಿ ಎಚ್.ಎಸ್. ಪ್ರಕಾಶ್ ಗೆದ್ದ್ದ್ದಿದಾರೆ. 1999ರಲ್ಲಿ ಬಿಜೆಪಿ ಗೆದ್ದಿದ್ದರೂ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 1983ರಿಂದ ಇಲ್ಲಿ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನದಲ್ಲಿದೆ.

ಕಳೆದ ಬಾರಿ ಪ್ರಕಾಶ್ ವಿರುದ್ಧ ಸ್ಪರ್ಧಿಸಿ 16 ಸಾವಿರ ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಬಿ. ಶಿವರಾಂ ಈ ಬಾರಿ ಅರಸೀಕೆರೆಯಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಹಾಸನದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್. ಎಂ. ಆನಂದ್ ಹಾಗೂ ಯುವ ಮುಖಂಡ ಎಚ್.ಕೆ. ಮಹೇಶ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದ ಡಾ.ಲೋಕೇಶ್ ಸಹ ಸಾಧ್ಯವಾದ ಎಲ್ಲ ಪ್ರಯತ್ನ ಮಾಡಿದ್ದರು. ಆದರೆ ಕಾಂಗ್ರೆಸ್ ಮಹೇಶ್ ಅವರನ್ನು ಕಣಕ್ಕಿಳಿಸಿದೆ.

ಹಾಸನ ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಅಂಥ ಬಂಡಾಯ ಕಾಣಿಸಿಕೊಂಡಿಲ್ಲ ಎಂಬ ಸಮಾಧಾನ ಮಹೇಶ್‌ಗೆ ಇದ್ದರೆ, ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಪ್ರಕಾಶ್‌ಗೆ ಆಂತರಿಕ ಬಂಡಾಯವೇ ದೊಡ್ಡ ಸಮಸ್ಯೆಯಾಗಿದೆ. ಸತತವಾಗಿ ಎರಡು ಅವಧಿ (ಒಟ್ಟು ಮೂರು ಬಾರಿ) ಯಿಂದ ಶಾಸಕರಾಗಿರುವ ಪ್ರಕಾಶ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಪಕ್ಷದೊಳಗಿನ ಒಂದು ವರ್ಗ ವಾದಿಸುತ್ತಿದ್ದರೆ, ಇನ್ನೊಂದು ಗುಂಪು, `ಪ್ರಕಾಶ್‌ಗೆ ಮೂರು ಬಾರಿ ಅವಕಾಶ ಲಭಿಸಿದೆ, ಹೊಸಬರಿಗೆ ಅವಕಾಶ ಕೊಡಿ' ಎಂದಷ್ಟೇ ಒತ್ತಾಯಿಸುತ್ತಿದೆ. ಆಕಾಂಕ್ಷಿಗಳೆಲ್ಲರೂ ಪಕ್ಷದ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಇಂಥ ಒತ್ತಾಯ ಮಾಡಿದ್ದಾರೆ. ನಮ್ಮಲ್ಲಿ ಯಾರಿಗೆ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವಿರೋಧವೇ ಜಿಲ್ಲೆಯ ಅಭ್ಯರ್ಥಿಗಳ ಘೋಷಣೆಯಾಗದಿರಲು ಕಾರಣ ಎನ್ನಲಾಗಿದೆ.

ಕ್ಷೇತ್ರದಲ್ಲಿ ನಡೆದ ಭೂಸ್ವಾಧೀನ, ಜಿಲ್ಲೆಯಲ್ಲಿ ಈಚೆಗೆ ನಡೆದ ಕೆಲ ಹೋರಾಟಗಳು, ನಡೆದ ನಗರಸಭೆ ಚುನಾವಣೆಯಲ್ಲಿ ಪಕ್ಷದೊಳಗೆ ಉಂಟಾಗಿರುವ ಅಸಮಾಧಾನ ಇವೆಲ್ಲವೂ ಜೆಡಿಎಸ್ ಅಭ್ಯರ್ಥಿ ಆಯ್ಕೆ ಮೇಲೆ ಪರಿಣಾಮ ಬೀರಬಹುದು.

ಬಿಜೆಪಿ ಹಾಗೂ ಕೆಜೆಪಿ ಇನ್ನೂ ಇಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ಎರಡೂ ಪಕ್ಷಗಳು ಇಲ್ಲಿ ಅಂಥ ಪ್ರಭಾವ ಬೀರುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಹಣಾಹಣಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.