ಆಲೂರು: ಗ್ರಾಮಗಳ ಅಭಿವೃದ್ಧಿ ರಾಷ್ಟ್ರದ ಅಭಿವೃದ್ಧಿ ಎಂದು ನುಡಿಯುವ ನಮ್ಮ ಸರ್ಕಾರ ಗ್ರಾಮೀಣ ಪ್ರದೇ ಶದ ಅಭಿವೃದ್ಧಿಗೆ ಗಂಭೀರವಾದ ಕ್ರಮವನ್ನು ತೆಗೆದು ಕೊಳ್ಳುತ್ತಿಲ್ಲ ಎಂಬುದಕ್ಕೆ ಅಭಿವೃದ್ಧಿ ಕಾಣದೆ ಹಾಳು ಬಿದ್ದಿರುವ ಕುಂದೂರು ಹೋಬಳಿ ಹಸಗನೂರು ಒಂದು ಉತ್ತಮ ಉದಾಹರಣೆ. ಇಲ್ಲಿಯ ಹಲವು ಹಳ್ಳಿಗಳು ಮೂಲಸೌಕರ್ಯಗಳಿಲ್ಲದೆ ಕೊರಗುತ್ತಿವೆ.
ತಾಲ್ಲೂಕು ಕೇಂದ್ರದಿಂದ 7 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ದಲಿತ ಕಾಲೋನಿ ಇದೆ. ಅಲ್ಲಿ 80 ಕುಟುಂಬಗಳು ಹಾಗೂ ಇತರ ಜನಾಂಗದ 80 ಕುಟುಂಬಗಳು ವಾಸಿಸುತಿದ್ದಾರೆ. ಕೃಷಿ ಇವರ ಬದುಕಿಗೆ ಆಧಾರವಾಗಿದೆ. ಆರ್ಥಿಕ ಬೆಳೆಗಳಾದ ಆಲೂಗೆಡ್ಡೆ, ಶುಂಠಿ ಬೆಳೆಯುತ್ತಾರೆ. ಆದರೆ ಈ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯದೆ ಹಳೆಯ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳೂ ಸೇರಿ ಬೃಹದಾಕಾರವಾಗಿ ಬೆಳೆಯುತ್ತಿವೆ.
ಬೈರಾಪುರ ಮಗ್ಗೆ ಬೈಪಾಸ್ ರಸ್ತೆ 5 ಕಿ.ಮೀ ಉದ್ದವಿದೆ. ಹಿಂದೆ ಯಾವತ್ತೋ ಡಾಂಬರ್ ಕಂಡಿರುವ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿವೆ. ರಸ್ತೆಯ ಅಕ್ಕಪಕ್ಕದಲ್ಲಿ ಚರಂಡಿಗಳು ಆಗಬೇಕಾಗಿದೆ. ಗ್ರಾಮದ ಒಳಗಿನ ರಸ್ತೆಗಳ ಸ್ಥಿತಿ ಹೇಳತೀರದು. ಒಳಗಿನ 1 ಕಿ.ಮೀ ರಸ್ತೆಯನ್ನು ತಕ್ಷಣ ಡಾಂಬರೀಕರಣ ಮಾಡಿಸಿಕೊಡುವುದಾಗಿ ಶಾಸಕರು ಜನಸ್ಪಂದನ ಸಭೆಯಲ್ಲಿ ಹೇಳಿದ್ದಾರೆ. ಈವರೆಗೆ ಆಗಿಲ್ಲ.
ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಬಿಸಿಯೂಟ, ನೀರಿನ ಸೌಲಭ್ಯ, ಆಟದ ಮೈದಾನವಿದೆ. ಅಂಗನವಾಡಿ, ಹಾಲಿನ ಡೈರಿ, ಮೂರುಕೊಳವೆ ಬಾವಿ, 12ಸ್ವಸಹಾಯ ಸಂಘಗಳು 2ಸೇದುವ ನೀರಿನ ಬಾವಿ ಗಳು ಇವೆ. ಪ್ರತಿದಿನ ನಾಲ್ಕು ಸಾರಿ ಬಸ್ಸು ಸೌಲಭ್ಯ ಇರುವುದರಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗ ಳಿಗೆ ಅನುಕೂಲವಿದೆ. ರಾತ್ರಿ ವೇಳೆ ಗ್ರಾಮದಲ್ಲಿ ಒಂದು ಬಸ್ಸು ನಿಲುಗಡೆ ಮಾಡಿದರೆ ಅನುಕೂಲವೆಂದು ಗ್ರಾಮದ ಮುಖಂಡ ಈರಯ್ಯ ಹೇಳುತ್ತಾರೆ.
ಗ್ರಾಮಕ್ಕೊಂದು ಸಮುದಾಯ ಭವನಬೇಕಾಗಿದೆ. ಗ್ರಾಮಕ್ಕೆ ಸ್ಮಷಾನದ ಜಾಗ ಬೇಕಾಗಿದೆ. ಗ್ರಾಮದಲ್ಲಿ ನಾಲ್ಕು ದೇವಸ್ಥಾನಗಳು ಇವೆ ಅದರಲ್ಲಿ ಚಿಕ್ಕಮ್ಮ ದೇವಸ್ಥಾನ ಶಿಥಿಲವಾಗಿದೆ. ಕದಾಳು ಗ್ರಾಮ ಪಂಚಾಯ್ತಿ ಸೇರಿದರೂ ಸಮಸ್ಯೆಗಳ ಸರಮಾಲೆ ಇದೆ. ಗ್ರಾಮದ ಮನೆಗಳ ಮುಂದೆಯೇ ತಿಪ್ಪೆಗಳಿದ್ದು ಸೊಳ್ಳೆಗಳ ವಂಶಾಭಿವೃದ್ಧಿ ಆಗುತ್ತ ಇತರ ಸಮಸ್ಯೆಗಳ ಜತೆಗೆ ಹಲವು ಕಾಯಿಲೆಯನ್ನೂ ಹೆಚ್ಚಿಸುತ್ತಿದೆ. ಮಳೆ ಬಂದಾಗ ಈ ಗ್ರಾಮದ ರಸ್ತೆಯಲ್ಲಿ ಯಾರೂ ಒಡಾಡಲೂ ಸಾಧ್ಯವಿಲ್ಲ ಗ್ರಾಮದಲ್ಲಿರುವ ಸಮಸ್ಯೆ ಗಳತ್ತ ಚುನಾಯಿತ ಪ್ರತಿನಿಧಿಗಳು ಗಮನ ಹರಿಸಿದರೆ ತಾಲ್ಲೂಕಿನಲ್ಲಿ ಒಳ್ಳೆಯ ಗ್ರಾಮ ಅನಿಸಿಕೊಳ್ಳಬಹುದು ಎಂದು ಜನರು ನುಡಿಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.