ADVERTISEMENT

ನಮ್ಮ ಸಂಸ್ಕೃತಿಯನ್ನು ಅನುಸರಿಸಿ: ಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:05 IST
Last Updated 17 ಡಿಸೆಂಬರ್ 2012, 6:05 IST

ಹಾಸನ: `ವಿಪ್ರ ಸಮುದಾಯ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ನಾವೇ ಹೊಣೆಗಾರರು. ನಮ್ಮ ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳನ್ನು ಪಾಲಿಸುತ್ತ ಬಂದಿದ್ದರೆ ಈ ಗೊಂದಲಗಳು ಉಂಟಾಗುತ್ತಿರಲಿಲ್ಲ' ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ. ಬಿ.ಎನ್.ವಿ. ಸುಬ್ರಹ್ಮಣ್ಯ ನುಡಿದರು.

ಕೊಂಡಿದ್ದ `ಜಿಲ್ಲಾ ವಿಪ್ರ ಮಹಿಳಾ ಸಮ್ಮೇಳನ - 2012' ಉದ್ಘಾಟಿಸಿ ಅವರು ಮಾತನಾಡಿದರು.
`ಹಿಂದೆ ಸಚಿವರೊಬ್ಬರು ಸಮುದಾಯವನ್ನು ಅವಮಾನಿಸುವಂಥ ಹೇಳಿಕೆ ನೀಡಿದ್ದು ಮಹಾಸಭಾದ ಹುಟ್ಟಿಗೆ     ಕಾರಣವಾಯಿತು. ನಮ್ಮ ಯೋಗಕ್ಷೇಮ ಕಾಪಾಡಲು ಸಂಘಟನೆ, ಸ್ವಾವಲಂಬನೆ ಹಾಗೂ ಸಂಸ್ಕಾರಗಳು ಅತಿಮುಖ್ಯ. ಜಿಲ್ಲಾ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬ್ರಾಹ್ಮಣ ಮಹಾಸಭಾ ಈ ವರ್ಷ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಬೆಂಗಳೂರಿನಲ್ಲಿ ವಿಪ್ರ ಮಹಿಳೆಯರಿಗಾಗಿ ಹಾಸ್ಟೆಲ್ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಸಮುದಾಯದವರನ್ನು ಸಂಘಟಿಸುವ ಉದ್ದೇಶದಿಂದ ಶೀಘ್ರದಲ್ಲೇ ವಿಪ್ರ ಸಂಪರ್ಕ ಅಭಿಯಾನವನ್ನೂ ಆರಂಭಿಸಲಾಗುವುದು' ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ, `ವಿಪ್ರ ಸಮುದಾಯ ಯೋಚಿಸುವ ರೀತಿಯನ್ನು ಬದಲಿಸಬೇಕಾಗಿದೆ. ಸಮುದಾಯದಲ್ಲಿ ಸಾಮಾನ್ಯವಾಗಿ ಸ್ತ್ರೀಯರಿಗೆ ಪದವಿವರೆಗಿನ ಶಿಕ್ಷಣ ಲಭಿಸುತ್ತದೆ. ಆದರೆ ಇಂದು ಅಷ್ಟು ಶಿಕ್ಷಣ ಸಾಲದು. ಉನ್ನತ        ಶಿಕ್ಷಣಕ್ಕೆ ಒತ್ತು ನೀಡಬೇಕು. ಲಿಂಗವನ್ನೇ ಆಧಾರವಾಗಿಟ್ಟುಕೊಂಡು ಯಾರೇ ಹೇಳಿಕೆಗಳನ್ನು ನೀಡಿದರೂ ಅದನ್ನು ವಿರೋಧಿಸುವ ಅಥವಾ ಕನಿಷ್ಠ ಪ್ರತಿಕ್ರಿಯೆ ನೀಡುವಂಥ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳಬೇಕು' ಎಂದರು.

ಮಹಾಸಭಾದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ಮುರಳೀಧರ ಅತಿಥಿಯಾಗಿ ಭಾಗವಹಿಸಿದ್ದರು.
ಕೆ.ಪಿ.ಎಸ್. ಪ್ರಮೋದ್ ಅವರ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ್ದ ಸ್ಮರಣಸಂಚಿಕೆ `ಧರಿತ್ರಿ'ಯನ್ನು ಅಖಿಲ ಕರ್ನಾಟಕ ಬ್ರಾಹ್ಮಿನ್ಸ್ ವೆಲ್‌ಫೇರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಬಿ.ವಿ. ಮಂಜುನಾಥ್ ಬಿಡುಗಡೆ ಮಾಡಿದರು. ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಪ್ರಧಾನ ಸಂಚಾಲಕಿ ಲೀಲಾವತಿ ಪ್ರಾಸ್ತಾವಿಕ ಮಾತನಾಡಿದರು.

ಮಧ್ಯಾಹ್ನ ನಡೆದ ಮೂರು ಗೋಷ್ಠಿಗಳಲ್ಲಿ ಸಮುದಾಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.