ADVERTISEMENT

ನಾಯಕ ಜನಾಂಗದ ಅಭಿವೃದ್ಧಿಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 6:25 IST
Last Updated 28 ಮಾರ್ಚ್ 2011, 6:25 IST
ನಾಯಕ ಜನಾಂಗದ ಅಭಿವೃದ್ಧಿಗೆ ಶ್ರಮಿಸಿ
ನಾಯಕ ಜನಾಂಗದ ಅಭಿವೃದ್ಧಿಗೆ ಶ್ರಮಿಸಿ   

ರಾಮನಾಥಪುರ: ಭಾರತೀಯ ಸಂಸ್ಕೃತಿ ನಿರ್ಮಾಣದಲ್ಲಿ ನಾಯಕ ಜನಾಂಗದ ರಾಜರು ಮತ್ತು ವಿದ್ವಾಂಸರು ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದು ಶಾಸಕ ಎ. ಮಂಜು ನುಡಿದರು. ಪಟ್ಟಣದಲ್ಲಿ ತಾಲ್ಲೂಕಿನ ಮಹರ್ಷಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯೇ ಪ್ರಧಾನವಾಗಿಲ್ಲದ ಬೇಡರ ಜನಾಂಗದಲ್ಲಿ ಹುಟ್ಟಿದ ವಾಲ್ಮೀಕಿ ಮಹರ್ಷಿ ಕೇವಲ ಆಧ್ಯಾತ್ಮಿಕ ಚಿಂತನೆ ಮೂಲಕವೇ ‘ರಾಮಾಯಣ’ ಮಹಾಗ್ರಂಥ ರಚಿಸಿದ್ದಾರೆ ಎಂದರು.

ನಾಯಕ ಜನಾಂಗದವರು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಂಡ ನಂತರ ಮೀಸಲಾತಿಯಡಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸುಧಾರಣೆ ಕಾಣಲು ಸಾಧ್ಯವಾಗಿದೆ. ಇತರೆ ವರ್ಗದ ಜನರು ಹಾಗೂ ಜನಪ್ರತಿನಿಧಿಗಳು ಪಕ್ಷಾತೀತವಾಗಿ ದುಡಿದು ಈ ಜನಾಂಗದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕಿದೆ ಎಂದು ಹೇಳಿದರು. ದಾವಣಗೆರೆ ಜಿಲ್ಲೆ ರಾಜನಹಳ್ಳಿ ವಾಲ್ಮೀಕಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್. ಚಿಕ್ಕಮಾದು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ವಾಲ್ಮೀಕಿ ಜನಾಂಗದ ಪ್ರಥಮ ಧರ್ಮಗುರು ಪುಣ್ಯಾನಂದಪುರಿ ಭಾವಚಿತ್ರ ಅನಾವರಣಗೊಳಿಸಿದರು. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಜಿ.ಪಂ. ಸದಸ್ಯೆ ಸರೋಜಮ್ಮ ರಾಮೇಗೌಡ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ಎಂಜಿನಿಯರ್ ಕೋದಂಡರಾಮು, ಸಂಘದ ತಾಲ್ಲೂಕು ಅಧ್ಯಕ್ಷ ಬಸವನಾಯಕ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಮಹಾಂತೇಶ್, ಕೊಡಗು ಜಿಲ್ಲಾ ಸಂಘದ ಅಧ್ಯಕ್ಷ ಅಶೋಕ, ಕೆ.ಆರ್. ನಗರ ತಾಲ್ಲೂಕು ಸಂಘದ ಅಧ್ಯಕ್ಷ ಬೆಟ್ಟನಾಯಕ, ಬೇಲೂರು ಸಂಘದ ಅಧ್ಯಕ್ಷ ಬಿ.ಆರ್. ರಂಗನಾಥ್, ಅರಸೀಕೆರೆ ಸಂಘದ ಕಾರ್ಯದರ್ಶಿ ಕೆ. ಜಯಣ್ಣ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜಕೀಯ ವೈರಿಗಳಾದ ಶಾಸಕ ಎ. ಮಂಜು ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾ ಸಂಘದ ಅಧ್ಯಕ್ಷ ಎಂ.ಆರ್. ತಿಮ್ಮರಾಜು ಸ್ವಾಗತಿಸಿದರು. ಕಾರ್ಯದರ್ಶಿ ಧರ್ಮಪ್ಪ ನಾಯಕ ನಿರೂಪಿಸಿದರು. ಇದಕ್ಕೂ ಮುನ್ನ ವಿವಿಧ ಕಲಾ ತಂಡಗಳ ಕಲಾವಿದವರು ಡೊಳ್ಳ ಕುಣಿತ, ಕೋಲಾಟ, ನಂದಿಧ್ವಜ ಕುಣಿತ, ವೀರಗಾಸೆ ನೃತ್ಯದ ಮೂಲಕ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರ ಮೆರವಣಿಗೆಯೊಂದಿಗೆ ರಾಮೇಶ್ವರ ದೇವಾಲಯದಿಂದ ಹೊರಟು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಕರೆತರಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.