ADVERTISEMENT

ನೀರಿನ ಅಭಾವ: ಮುಂಜಾಗ್ರತೆಗೆ ಸೂಚನೆ

ಅರಕಲಗೂಡು ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2013, 5:50 IST
Last Updated 30 ಜನವರಿ 2013, 5:50 IST
ಅರಕಲಗೂಡಿನಲ್ಲಿ ಮಂಗಳವಾರ ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಣ್ಣ, ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ ಇದ್ದಾರೆ.
ಅರಕಲಗೂಡಿನಲ್ಲಿ ಮಂಗಳವಾರ ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಣ್ಣ, ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ ಇದ್ದಾರೆ.   

ಅರಕಲಗೂಡು: ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾ ಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಸಕ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಾಲ್ಲೂಕಿನಲ್ಲಿ ಸಾಕಷ್ಟು ಮಳೆ ಬೀಳದೆ ಬರಗಾಲಕ್ಕೆ ತುತ್ತಾಗಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬೇಸಿಗೆ ದಿನಗಳು ತ್ರಾಸದಾಯಕವಾಗಲಿವೆ.

ಇದಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುವ ಸಿದ್ಧತೆ ಆರಂಭಿಸುವಂತೆ ತಿಳಿಸಿದರು. ವಿದ್ಯುತ್ ಸಮಸ್ಯೆಯಿಂದ ನೀರು ಸರಬ ರಾಜಿನ್ಲ್ಲಲಿ ವ್ಯತ್ಯಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ನೀರಿಗೆ ತೊಂದರೆ ಪಡದಂತೆ ಕೊಳವೆ ಬಾವಿ ದುರಸ್ತಿಗೊಳಿಸಿಸಬೇಕು. ಹ್ಯಾಂಡ್‌ಪಂಪ್ ಅಳವಡಿಕೆಗೆ ಕ್ರಮ ಕೈಗೊಳ್ಳ ಬೇಕು ಎಂದು ಸಲಹೆ ನೀಡಿದರು.

ನೀರು ಸರಬರಾಜು ಯೋಜನೆಗಳಿಗೆ ವಿಳಂಬ ನೀತಿ ಅನುಸರಿಸದೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಅಧಿಕಾರಿ ಗಳಿಗೆ ಸೂಚಿಸಿದರು. ನೀರಿಗಾಗಿ ಸರ್ಕಾರ ಕೊರೆಸಿದ ಕೊಳವೆ ಬಾವಿಗಳ ಅಕ್ಕಪಕ್ಕ ದಲ್ಲಿ ನಿಯಮ ಮೀರಿ ಕೊಳವೆಬಾವಿ ತೆಗೆಸಬಾರದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ಕಾಮಗಾರಿ ವಿಳಂಬವಾಗುತ್ತಿದೆ. ಇಂತಹ ಬೇಜವಾಬ್ದಾರಿ ಸಹಿಸುವುದಿಲ್ಲ. ಸುವರ್ಣ ಗ್ರಾಮ ಯೋಜನೆಯಡಿ ನೀಡುವ ತರಬೇತಿ ಕಾರ್ಯಾಗಾರ ಗಳಲ್ಲೂ ಅಕ್ರಮಗಳ ದೂರುಗಳು ಬರು ತ್ತಿವೆ. ಈ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದರು.

ವಸತಿ ಯೋಜನೆಯಡಿ ತಾಲ್ಲೂಕಿಗೆ 3 ಸಾವಿರ ಹೆಚ್ಚುವರಿ ಮನೆಗಳು ಮಂಜೂರಾಗಿ ಆರು ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಎಂದು ಕೆ.ಡಿ.ಪಿ. ನಾಮಕರಣ ಸದಸ್ಯ ಸುರೇಶ್ ಆರೋಪಿ ಸಿದರು. ಹೆಚ್ಚುವರಿ ಮನೆಗಳನ್ನು ಸರ್ಕಾರ ಕೊಟ್ಟಿಲ್ಲ. ನಾನು ಸರ್ಕಾರದ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸಿ ತಂದಿದ್ದೇನೆ ಎಂದು ಶಾಸಕ ಮಂಜು ತಿರುಗೇಟು ನೀಡಿದರು. ಕೆಲಕಾಲ ಶಾಸಕರು ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಮನೆ ವಿತರಣೆ ವಿಳಂಬದ ಬಗ್ಗೆ ಸತ್ಯ ಹೇಳಿದರೆ ನಿಮ್ಮ ಬಿಜೆಪಿ ಸರ್ಕಾರದ ಮರ‌್ಯಾದೆ ಹೋಗಲಿದೆ ಎಂದ ಮಂಜು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದೆ ದುಡ್ಡು ಬಿಡುಗಡೆಯಾಗಿಲ್ಲ. ಹೀಗಾಗಿ ಮನೆ ವಿತರಣೆಯಾಗಿಲ್ಲ ಎಂದು ಗುದ್ದು ನೀಡಿದರು. ನಿವೇಶನ ಇಲ್ಲದವರಿಗೂ ಮನೆ ಮಂಜೂರಾತಿ ಮಾಡಿರುವ ಕಾರಣ ಹಲವವು ಮನೆಗಳು ನಿರ್ಮಾಣ ವಾಗದೆ ಪ್ರಗತಿ ಕುಂಟಿತವಾಗಿದೆ.

ಇಂತಹ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಬಿ.ಪಿ.ಎಲ್. ಕಾರ್ಡ್ ವಿತರಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಒಂದು ಕಾರ್ಡ್ ನೀಡಲು ಒಂದು ಸಾವಿರ ರೂಪಾಯಿ ಹಣ ಪಡೆದಿದ್ದಾರೆ. ಸಂಬಂಧಿಸಿದ ಆಹಾರ ಇಲಾಖೆ ಅಧಿಕಾರಿಯನ್ನು ಅಮಾನತು ಪಡಿಸಿ ತನಿಖೆ ನಡೆಸುವಂತೆ ನಾಮಕರಣ ಸದಸ್ಯರು ಆಗ್ರಹಿಸಿದರು.

ಮಂಜೂರಾದ 11 ಸಾವಿರ ಕಾರ್ಡ್ ಗಳಲ್ಲಿ ಕೇವಲ ಆರು ಸಾವಿರ ಕಾರ್ಡ್ ಮಾತ್ರ ವಿತರಣೆಯಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ವಾರದಲ್ಲಿ ಎಲ್ಲ ಕಾರ್ಡ್‌ಗಳನ್ನು ವಿತರಣೆ ಮಾಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ, ತಾಲ್ಲೂಕು ಪಂಚಾ ಯಿತಿ ಉಪಾಧ್ಯಕ್ಷೆ ಸಾಕಮ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಣ್ಣ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.